
ಪ್ರಗತಿವಾಹಿನಿ ಸುದ್ದಿ, ಖಾನಾಪುರ:ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಕಂಟೇನರ್ ಲಾರಿ ಮತ್ತು ಅಳ್ನಾವರದಿಂದ ಗೋವಾದತ್ತ ಹೊರಟಿದ್ದ ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಧಾರವಾಡ ಜಿಲ್ಲೆ ಅಳ್ನಾವರ ಪಟ್ಟಣದ ಕಾರು ಚಾಲಕ ಸೇರಿ ಇಬ್ಬರು
ಸಾವನ್ನಪ್ಪಿದ ಘಟನೆ ತಾಲೂಕಿನ ನಾಗರಗಾಳಿ-ತಾವರಗಟ್ಟಿ ನಡುವೆ ರಾಮನಗರ-ಧಾರವಾಡ ರಾಜ್ಯ
ಹೆದ್ದಾರಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಈ ಅಪಘಾತದಲ್ಲಿ ಕಾರಿನ ಚಾಲಕ ಸಾಗರ ಬೀಡಿಕರ (26) ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿಠ್ಠಲ ಕಾಕಡೆ (28) ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗಮಧ್ಯದಲ್ಲಿ
ಕೊನೆಯುಸಿರೆಳೆದಿದ್ದಾರೆ. ಇವರಿಬ್ಬರೂ ಆಪ್ತ ಮಿತ್ರರಾಗಿದ್ದರು ಎನ್ನಲಾಗಿದೆ.
ಕಂಟೇನರ್ ಮತ್ತು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಡಿಕ್ಕಿಯ
ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿದೆ.
ಕಾರಿನಲ್ಲಿ ಐವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಅಳ್ನಾವರ ಪಟ್ಟಣದ
ನಿವಾಸಿಗಳಾಗಿದ್ದು, ಗಿರೀಶ ನಾಂದೂರಕರ, ವೀರಣ್ಣ ಕೋರಿಶೆಟ್ಟಿ ಮತ್ತು ಪ್ರೇಮಾಕಾಂತ
ಪಾಲಕರ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಿಂದಾಗಿ ಪಲ್ಟಿಯಾಗಿದ್ದ ಕಾರಿನಲ್ಲಿ ಸಿಲುಕಿದ್ದವರನ್ನು ಆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ವಾಹನ ಚಾಲಕರು ಮತ್ತು ಪ್ರಯಾಣಿಕರು ರಕ್ಷಿಸಿ ಅವರಿಗೆ ಪ್ರಥಮೋಪಚಾರ ನೀಡಿದ್ದಾರೆ.
ಕಾರಿನಲ್ಲಿದ್ದ ಯುವಕರು ಗೋವಾಕ್ಕೆ ಹೊರಟಿದ್ದರು. ಈ ವೇಳೆ ಕಾರಿಗೆ ಕಂಟೇನರ್ ಡಿಕ್ಕಿ ಹೊಡೆಯಿತು. ಕಾರಿನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಸ್ಥಳಕ್ಕೆ ಖಾನಾಪುರ ಪೊಲೀಸರು ಭೇಟಿ ನೀಡಿ ಮೃತದೇಹ ಹೊರತೆಗೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ಹಯ್ಯಲಾಲ್ ಕೊಲೆ ಆರೋಪಿತರ ಮೇಲೆ ಕೋರ್ಟ್ ಆವರಣದಲ್ಲೇ ಹಲ್ಲೆ