*ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹೈಡ್ರಾಮಾ*: *ಡಿಜೆಗಾಗಿ ಮೂರ್ತಿಯನ್ನೇ ವಾಪಸ್ ತಂದ ಯುವಕರು*!

ಪ್ರಗತಿವಾಹಿನಿ ಸುದ್ದಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಪೊಲೀಸರು ಅನುಮತಿ ನೀಡದಿದ್ದಕ್ಕೆ ಆಕ್ರೋಶಗೊಂಡ ಯುವಕರು ಮೆರವಣಿಗೆಯನ್ನು ಅರ್ಧದಲ್ಲೇ ನಿಲ್ಲಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮಾರು 600 ಮೀಟರ್ ಸಾಗಿದ್ದ ಮೆರವಣಿಗೆಯನ್ನು ನಿಲ್ಲಿಸಿದ ಯುವಕರ ಗುಂಪು ಬಳಿಕ ಗಣೇಶ ಮೂರ್ತಿಯನ್ನು ವಾಪಸ್ ತೆಗೆದುಕೊಂಡು ಹೋಗಿ ಮರುಪ್ರತಿಷ್ಠಾಪನೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕೇರೂರು ಗ್ರಾಮದ ಬನಶಂಕರಿ ಗಜಾನನ ಯುವಕ ಸಂಘದ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬಳಿಕ ವಿಸರ್ಜನೆಗಾಗಿ ಮೆರವಣಿಗೆ ಆರಂಭಿಸಲಾಗಿತ್ತು. ಆದರೆ, ನಿಯಮಗಳ ಕಾರಣ ನೀಡಿ ಪೊಲೀಸರು ಡಿಜೆ ಬಳಕೆಗೆ ಅನುಮತಿ ನಿರಾಕರಿಸಿದ್ದಾರೆ. ಇದರಿಂದ ಯುವಕ ಸಂಘದ ಸದಸ್ಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ವಾಗ್ವಾದವೂ ನಡೆದಿದೆ.
ಡಿಜೆ ಬಳಕೆಗೆ ಅನುಮತಿ ನೀಡಲೇಬೇಕು ಎಂದು ಸಂಘದ ಸದಸ್ಯರು ಪಟ್ಟು ಹಿಡಿದಿದ್ದಾರೆ. ಪೊಲೀಸರಿಂದ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ಮುಂದುವರಿಸದೆ ಗಣೇಶ ಮೂರ್ತಿಯನ್ನು ವಾಪಸ್ ಕೊಂಡೊಯ್ಯಲಾಗಿದೆ. ಬಳಿಕ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪನೆ ಮಾಡಲಾಗಿದೆ.
ಡಿಜೆ ಬಳಕೆಗೆ ಅನುಮತಿ ಸಿಗುವವರೆಗೆ ಗಣೇಶ ಮೂರ್ತಿ ವಿಸರ್ಜನೆ ಮಾಡುವುದಿಲ್ಲ ಎಂದು ಯುವಕ ಸಂಘದ ಸದಸ್ಯರು ತಿಳಿಸಿದ್ದಾರೆ. ನಿರ್ಬಂಧ ಮುಂದುವರಿದರೆ ಚಿಕ್ಕೇರೂರು ಪಟ್ಟಣ ಬಂದ್ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಘಟನೆ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




