*ಇದು ದಶಪಥವಲ್ಲ, ಭ್ರಷ್ಟಪಥ…; ಉದ್ಘಾಟನೆಯಾದ ಒಂದೇ ದಿನಕ್ಕೆ ಕಿತ್ತು ಬಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿದ್ದ ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆಯಾದ ಮರುದಿನವೇ ಕಿತ್ತು ಬಂದಿದೆ. ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಒಂದು ವರ್ಷವಾದರೂ ರಸ್ತೆ ಬಾಳಿಕೆ ಬರಬೇಕಿತ್ತು. ಒಂದು ತಿಂಗಳು, ಕೊನೆ ಪಕ್ಷ ಒಂದು ವಾರವಾದರೂ ಬಾಳಿಕೆ ಬರಬೇಕಿತ್ತು. ಆದರೆ ಉದ್ಘಾಟನೆಯಾದ ಒಂದೇ ದಿನಕ್ಕೆ ದಶಪಥ ರಸ್ತೆ ಕಿತ್ತು ಹೋಗಿದೆ. ರಾಜ್ಯದ 40% ಕೇಂದ್ರದ 40%, ಒಟ್ಟು 80% ಕಮಿಷನ್ ಕಾಮಗಾರಿಯ ಬಂಡವಾಳ ಹೊರಬಂದಿದೆ. ಇದು ದಶಪಥವಲ್ಲ ಭ್ರಷ್ಟಪಥ! ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಈಗ ಕಿತ್ತುಹೋದ ರಸ್ತೆ ದುರಸ್ತಿ ಕಾಮಗಾರಿಯ ಗುದ್ದಲಿ ಪೂಜೆಗೆ ಮತ್ತೊಮ್ಮೆ ಮೋದಿಯನ್ನು ಕರೆಸಿ. ದುರಸ್ತಿಯಾದ ನಂತರ ಉದ್ಘಾಟನೆಗೆ ಇನ್ನೊಮ್ಮೆ ಮೋದಿ ಕರೆಸಿ. ಗುಂಡಿ ಮುಚ್ಚಿದ ಸಂತೋಷಕ್ಕಾಗಿ ಮಗದೊಮ್ಮೆ ಮೋದಿ ಕರೆಸಿ ರೋಡ್ ಶೋ ಮಾಡಿಸಿ. ಆಗಬಹುದೇ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಬಿಡದಿ ಬೈಪಾಸ್ ಮುಕ್ತಾಯವಾಗುವ ಜಾಗದಲ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿದ್ದು, ಸಧ್ಯ ದುರಸ್ತಿ ಕಾರ್ಯಗಳು ನಡೆಯುತ್ತಿವೆ.
https://twitter.com/INCKarnataka/status/1635897693720698880?s=20
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ