
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಂದು ಹಿರಿಯ ಪತ್ರಕರ್ತರೊಬ್ಬರು ಸಾವನ್ನಪ್ಪಿದ್ದಾರೆ.
ಹೃದಯಾಘಾತದಿಂದ 54 ವರ್ಷದ ಹಿರಿಯ ಪತ್ರಕರ್ತ, ವಿಜಯಕರ್ನಾಟಕ ಮುಖ್ಯ ಉಪಸಂಪಾದಕ ಗೌರಿಪುರ ಚಂದ್ರು ಮೃತಪಟ್ಟಿದ್ದಾರೆ. ಪತ್ರಕರ್ತ ಮೃತಪಟ್ಟ ಹಿನ್ನಲೆಯಲ್ಲಿ ಅವರ ಗಂಟಲುದ್ರವ, ರಕ್ತದ ಮಾದರಿಯನ್ನು ಕೊವಿಡ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಇದೀಗ ಅವರ ವರದಿಯಲ್ಲಿ ಕೊರೊನಾ ಪಾಸಿಟೀವ್ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರಾದ ಗೌರಿಪುರ ಚಂದ್ರು ಎಂಜಿನಿಯರಿಂಗ್ ಪದವೀಧರರಾಗಿದ್ದರೂ ಪತ್ರಕರ್ತ ವೃತ್ತಿ ಆರಿಸಿಕೊಂಡಿದ್ದರು. ವಿಜಯಕರ್ನಾಟಕದ ಸಹೋದರ ಪತ್ರಿಕೆಯಾದ ’ಬೋಧಿವೃಕ್ಷ’ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತೀವ್ರ ಮಾನಸಿಕ ಒತ್ತಡ ಹಾಗೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಚಂದ್ರು ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಇಂದು ಕೊರೊನಾ ಸೋಂಕಿಗೆ ಬೆಂಗಳೂರಿನಲ್ಲಿ ನಾಲ್ವರು ಬಲಿಯಾಗಿದ್ದು, ನಾಲ್ವರು ಕೂಡ 30ರಿಂದ 40 ವರ್ಷಗಳ ಒಳಗಿನವರಾಗಿದ್ದಾರೆ. ಅಲ್ಲದೇ ಬೀದರ್ ಜಿಲ್ಲೆಯಲ್ಲಿ ಕೂಡ ಇಂದು 35 ವರ್ಷದ ವ್ಯಕ್ತಿಯೊಬ್ಬರು ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂಬುದು ಆತಂಕವನ್ನು ಹೆಚ್ಚಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ