*ಮಗುವಿನ ಮುಖ ನೋಡದೇ ಸಾವನ್ನಪ್ಪಿದ ಬಾಣಂತಿ: ಆಸ್ಪತ್ರೆ ವಿರುದ್ಧ ಕುಟುಂಬಸ್ಥ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆರಿಗೆ ನೋವು ಎಂದು ನಿನ್ನೆ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದ 23 ವರ್ಷದ ಮಹಿಳೆ ಹೆರಿಗೆಯಾದ ಕೆಲ ಹೊತ್ತಿನಲ್ಲಿಯೇ ಮೃತಪಟ್ಟಿದ್ದಾಳೆ. ಈ ಸಾವಿಗೆ ವೈದ್ಯರೆ ಕಾರಣ. ನಮ್ಮ ಮಗಳ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಇದೆ ಎಂದು ಪೋಷಕರು ಆರೋಪಿಸಿದ್ದಾರೆ.
ವಂಟಮೂರಿ ಬಡಾವಣೆಯ ನಿವಾಸಿಯಾಗಿದ್ದ ನಿಖಿತಾ ಮಲ್ಲಿಕ್ ಮಾದರ್ (23) ಳನ್ನು ಬೆಳಗಾವಿಯ ವಂಟಮೂರಿಯ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪರಿಶೀಲನೆ ನಡೆಸಿದ ವೈದ್ಯರು ಸಿಜರಿನ್ ಮಾಡೋ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ರು. ಕುಟುಂಬಸ್ಥರು ಸಹ ಇದಕ್ಕೆ ಒಪ್ಪಿಗೆ ನೀಡಿ, ಮಗಳ ಹೆರಿಗೆ ವಾರ್ಡ್ ಬಳಿಯಲ್ಲಿಯೇ ನಿಂತು ಕಾಯುತ್ತಿದ್ದರು. ಕೆಲ ಹೊತ್ತಿನ ಬಳಿಕ ವಾರ್ಡ್ ನಿಂದ ಹೊರ ಬಂದ ವೈದ್ಯಕೀಯ ಸಿಬ್ಬಂದಿ, ಹೆಣ್ಣು ಮಗು ಜನಿಸಿದೆ ಎಂದು ತಂದು ತೋರಿಸಿದ್ರು. ಮಗಳು ಹೇಗಿದ್ದಾಳೆ ಎಂದು ಕೇಳಿದ್ದಕ್ಕೆ ಯಾವುದೇ ಉತ್ತರ ನೀಡಿಲ್ಲ. ಇದು ಕುಟುಂಬಸ್ಥರ ಆತಂಕವನ್ನು ಹೆಚ್ಚು ಮಾಡಿದೆ. ಹೆರಿಗೆಯಾಗಿ 2 ಗಂಟೆ ಕಳೆದ್ರು ವೈದ್ಯರು ಸರಿಯಾಗಿ ಸ್ಪಂದಿಸಿಲ್ಲ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ನಿಖಿತಾ ಸಾವನ್ನಪ್ಪಿದ್ದಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ನಿಖಿತಾ ಸಾವು ವೈದ್ಯರ ನಿರ್ಲಕ್ಷ್ಯದಿಂದಲೇ ಆಗಿದೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.
ಈಗಾಗಲೇ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್ ಸಹ ದಾಖಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ಟಿಎಚ್ ಓ ರಮೇಶ ದಂಡಗಿ ತಿಳಿಸಿದ್ದಾರೆ.