ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶಾಲೆಗಳನ್ನು ತೆರೆಯುವ ಬಗ್ಗೆ ಗೊಂದಲದಲ್ಲಿವೆ. ಕೆಲ ಶಾಲೆಗಳು ಸರ್ಕಾರ ಬೇಡ ಎಂದರೂ ಆನ್‍ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿವೆ. ಆದರೆ ಬೆಳಗಾವಿ ಜಿಲ್ಲೆಯ ಶಾಲೆಯೊಂದು ಮಕ್ಕಳಿಗೆ ವಿಭಿನ್ನವಾಗಿ ಪಾಠ ಮಾಡುತ್ತಿದೆ.
ಶಿಕ್ಷಕರು ಶಾಲಾ ಮಕ್ಕಳ ಮನೆಗಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಜಿ.ಎಂ.ಹಂಜಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆಡಳಿತ ಮಂಡಳಿ ಶಿಕ್ಷಕರೇ ಮನೆ ಮನೆಗೆ ತೆರಳಿ ಪಾಠ ಮಾಡುವಂತೆ ತಿಳಿಸಿದೆ.
600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರೇ ಖುದ್ದಾಗಿ ತೆರಳಿ ಪಾಠ ಮಾಡುತ್ತಿದ್ದಾರೆ. ದಿನನಿತ್ಯ 50ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ತೆರಳಿ ಹೋಂವರ್ಕ್ ಕೊಟ್ಟು ಬರುತ್ತಾರೆ. ಬಳಿಕ ಮತ್ತೆ ಮೂರು ದಿನಗಳ ಬಳಿಕ ಹೋಂವರ್ಕ್ ಚೆಕ್ ಮಾಡಿ ಹೊಸ ಹೋಂವರ್ಕ್ ಕೊಟ್ಟು ಬರುವ ಕೆಲಸವನ್ನ ಶಿಕ್ಷಕರು ಮಾಡುತ್ತಿದ್ದಾರೆ.
1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ 28 ಶಿಕ್ಷಕರ ತಂಡ ದಿನನಿತ್ಯ ಹೋಗಿ ಪಾಠ ಮಾಡಿ ಬರುತ್ತಿದ್ದಾರೆ. ಈ ಹೊಸ ವ್ಯವಸ್ಥೆಯಿಂದ ಪಾಲಕರು ಖುಷಿಯಾಗಿದ್ದಾರೆ. ವಿದ್ಯಾರ್ಥಿಗಳು ಮತ್ತೆ ದಿನನಿತ್ಯ ಅಭ್ಯಾಸದ ಕಡೆಗೆ ಗಮನ ಕೊಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ