
ನಾಲ್ವರು ಮಾಜಿ ಸಂಸದರು, ಮೂವರು ಮಾಜಿ ಶಾಸಕರು ಆಕಾಂಕ್ಷಿಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತದ ಮುಂದಿನ ಸಂಸದರು ಯಾರು?
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಈಗ ಫುಲ್ ವೈರಲ್ ಆಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ ಎನ್ನುವುದಕ್ಕಿಂತ, ಬೆಳಗಾವಿಯ ಮುಂದಿನ ಎಂಪಿ ಯಾರು? ಎಷ್ಟು ಅಂತರದಿಂದ ಗೆಲ್ಲುತ್ತಾರೆ ಎನ್ನುವಷ್ಟು ಮುಂದುವರಿದಿದೆ ಚರ್ಚೆ.
ಬೆಳಗಾವಿ ಲೋಕಸಭಾ ಸದಸ್ಯರಾಗಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದ ನಂತರ ಇಲ್ಲಿ ನಡೆಯಲಿರುವ ಉಪಚುನಾವಣೆಗಾಗಿ ಜೋರು ತಯಾರಿ ನಡೆದಿದೆ. ಅಂಗಡಿ ಮೃತರಾದ 4ನೇ ದಿನವೇ ಆಕಾಂಕ್ಷಿಗಳ ಲಾಬಿ ಶುರುವಾಗಿದೆ. ಕ್ಷೇತ್ರ ತನ್ನ ಕೈಯಲ್ಲಿರುವುದರಿಂದ ಬಿಜೆಪಿ ಕಾರ್ಯಕರ್ತರು ನಾ ಮುಂದು ತಾ ಮುಂದು ಎಂದು ಟಿಕೆಟ್ ಫೈಟ್ ಶುರು ಮಾಡಿದ್ದಾರೆ.
ಈಗ ಬಿಜೆಪಿಯಲ್ಲಿ ಏನಿಲ್ಲವೆಂದರೂ 15ಕ್ಕೂ ಹೆಚ್ಚು ಆಕಾಂಕ್ಷಿಗಳು ಕಾಣಿಸಿಕೊಂಡಿದ್ದಾರೆ. ಅವರೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಮ್ಮ ಪರವಾಗಿ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ತಮಗೆ ಟಿಕೆಟ್ ಪಡೆಯಲು ಪ್ರತಿಸ್ಫರ್ಧಿಗಳಾಗಬಹುದಾದವರ ವಿರುದ್ಧ ಅಪಪ್ರಚಾರವನ್ನೂ ನಡೆಸುತ್ತಿದ್ದಾರೆ.
ಹೆಚ್ಚುತ್ತಿರುವ ಆಕಾಂಕ್ಷಿಗಳು
ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಸದಾಗಿ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಪುತ್ರ, ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಅಮರನಾಥ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮರನಾಥ ಜಾರಕಿಹೊಳಿ ಮುಂದಿನ ಎಂಪಿ, 5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನುವ ಬರಹವನ್ನೊಳಗೊಂಡ ಪೋಸ್ಟ್ ಗಳು ಹರಿದಾಡುತ್ತಿವೆ.
ಈ ಕುರಿತು ಪ್ರಗತಿವಾಹಿನಿ ಜೊತೆ ಮಾತನಾಡಿದ ರಮೇಶ ಜಾರಕಿಹೊಳಿ, ಇಷ್ಟು ಸಣ್ಣ ವಯಸ್ಸಿನಲ್ಲಿ ಮಗನನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಈ ಚುನಾವಣೆಗೆ ನಾಲ್ವರು ಮಾಜಿ ಸಂಸದರು ಹಾಗೂ ಮೂವರು ಮಾಜಿ ಶಾಸಕರು ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಮಾಜಿ ಸಂಸದ ಕಾಂಗ್ರೆಸ್ ನ ಪ್ರಕಾಶ ಹುಕ್ಕೇರಿ, ಬಿಜೆಪಿಯ ರಾಜ್ಯಸಭೆ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ರಮೇಶ ಕತ್ತಿ, ಅಮರಸಿಂಹ ಪಾಟೀಲ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್, ಸಂಜಯ ಪಾಟೀಲ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನೂ ಡಜನ್ ಗಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ.
ಬಿಜೆಪಿಯಲ್ಲಿ ಕೇಂದ್ರ ಚುನಾವಣೆ ಸಮಿತಿಯೇ ಅಭ್ಯರ್ಥಿ ಆಯ್ಕೆ ಮಾಡಲಿದ್ದು, ಆಕಾಂಕ್ಷಿಗಳನ್ನೆಲ್ಲ ಬಿಟ್ಟು ಹೊಸಮುಖ ಮುನ್ನೆಲೆಗೆ ಬಂದರೂ ಬರಬಹುದು.
ಇದೇ ವೇಳೆ, ಪ್ರಕಾಶ ಹುಕ್ಕೇರಿ ಅಲ್ಲದೆ ಕಾಂಗ್ರೆಸ್ ನಲ್ಲೂ ಅನೇಕರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಶಾಸಕ ಅಶೋಕ ಪಟ್ಟಣ ಹೆಸರೂ ಕೇಳಿ ಬರುತ್ತಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಹೋದರ, ಯುವ ಕಾಂಗ್ರೆಸ್ ಮುಖಂಡ, ಹರ್ಷ ಶುಗರ್ಸ್ ಎಂಡಿ ಚನ್ನರಾಜ ಹಟ್ಟಿಹೊಳಿ ಹೆಸರನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಂತರ ಎರಡೂ ಪಕ್ಷಗಳ ಅಧ್ಯಕ್ಷರು ಬೆಳಗಾವಿಗೆ ಬಂದು ಹೋಗಿದ್ದಾರೆ. ಇಲ್ಲಿಯ ಕಾರ್ಯಕರ್ತರ ನಾಡಿಮಿಡಿತ ಅಭ್ಯಸಿಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಯಾವರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.
ಈ ಸುದ್ದಿಯನ್ನೂ ಓದಿ – ಮಗನನ್ನು ಎಂಪಿ ಚುನಾವಣೆಗೆ ನಿಲ್ಲಿಸುತ್ತಾರಾ?: ರಮೇಶ ಜಾರಕಿಹೊಳಿ ಪ್ರತಿಕ್ರಿಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ