
ಪ್ರಗತಿವಾಹಿನಿ ಸುದ್ದಿ: ಕೂಲಿ ಕಾರ್ಮಿಕರು ವಾಸವಾಗಿದ್ದ 40 ಕ್ಕೂ ಹೆಚ್ಚು ಶೆಡ್ ಗಳಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ವೀರಣ್ಣಪಾಳ್ಯ ಮುಖ್ಯರಸ್ತೆಯ ಬಳಿ ಇರುವ 40 ಶೆಡ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಲಿ ಕಾರ್ಮಿಕರ ಶೆಡ್ ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕಾರ್ಮಿಕರು ಉಟ್ಟ ಬಟ್ಟೆಯಲ್ಲಿ ಹೊರಗೋಡಿ ಬಂದಿದ್ದಾರೆ.
ಶೆಡ್ ನಲ್ಲಿದ್ದ ಕರಮಿಕರ ಬಟ್ಟೆ, ದಿನಸಿ ಸಾಮಾನುಗಳು, ಅಪಾರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಶೆಡ್ ನಲ್ಲಿದ್ದ ಕಾರ್ಮಿಕರು ಆಟಿಕೆ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಾಗಿದ್ದಾರೆ. ಉಟ್ಟ ಬಟ್ಟೆ ಬಿಟ್ಟರೆ ಬೇರೆ ಬಟ್ಟೆ ಇಲ್ಲ. ಎಲ್ಲಾ ಬಟ್ಟೆಗಳು ಸುಟ್ಟು ಹೋಗಿವೆ ಎಲ್ಲಿ ಹೋಗಬೇಕು ಏನು ಮಾಡಬೇಕು ತಿಳಿಯುತ್ತಿಲ್ಲ ಎಂದು ಕಾರ್ಮಿಕರು ಕಣ್ಣೀರಿಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ 40 ಶೆಡ್ ಗಳು ಸುಟ್ಟು ಕರಕಲಾಗಿವೆ. ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.