*ಭೀಕರ ಅಪಘಾತ: ಬೈಕ್ ಸವಾರರ ಮೇಲೆಯೇ ಹರಿದ ಲಾರಿ; ಮೂವರು ಯುವಕರು ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೆಳಗೆ ಬಿದ್ದಿದ್ದ ನಾಲ್ವರು ಯುವಕರ ಮೇಲೆಯೇ ಲಾರಿ ಹರಿದು ಹೋಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.
ಭದ್ರಾವತಿಯ ಕಲ್ಲಿಹಾಳ್-ಅರಹತೊಳಲು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಮೊದಲು ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ನಲ್ಲಿದ್ದ ನಾಲ್ವರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ವೇಗವಾಗಿ ಬಂದ ಲಾರಿ ಬೈಕ್ ಸವಾರರ ಮೇಲೆಯೇ ಹರಿದು ಹೋಗಿದೆ.
ಲಾರಿ ಚಕ್ರಕ್ಕೆ ಸಿಲುಕಿದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಗ್ಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ವಿಕಾಸ್ (18), ಯಶ್ವಂತ್ (17) ಶಶಾಂಕ್ (17) ಎಂದು ಗುರುತಿಸಲಾಗಿದೆ.
ಮೃತ ಮೂವರು ಹಳೆ ಜಂಬರಗಟ್ಟ ನಿವಾಸಿಗಳು. ಅರದೊಟ್ಟು ಗ್ರಾಮದ ನಿವಾಸಿ ಬಸವರಾಜ್ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ