ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಗಾಂಧೀಜಿಯವರ ನೇತೃತ್ವದಲ್ಲಿ ‘ಬ್ರಿಟೀಷರೇ, ಭಾರತ ಬಿಟ್ಟು ತೊಲಗಿ’ ಎನ್ನುವ ಹೋರಾಟಕ್ಕೆ 81 ವರ್ಷ ಆಗಿದೆ. ಈಗ ಮತ್ತೆ 8 ದಶಕಗಳ ನಂತರ ‘ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟ’ ಮಾಡಬೇಕಾಗಿ ಬಂದಿದೆ. ಅಂದು ಬ್ರಿಟೀಷರ ವಿರುದ್ಧ ಮಾಡಿದ್ದ ಹೋರಾಟ ಇಂದು ಕೋಮುವಾದಿ, ಸರ್ವಾದಿಕಾರಿ ಸರ್ಕಾರ ತೊಲಗಿಸಲು ಮಾಡಬೇಕಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಈಗ ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ಕ್ವಿಟ್ ಇಂಡಿಯಾ ಚಳವಳಿ’ ದಿನಾಚರಣೆಯಲ್ಲಿ ಮಾತನಾಡುತ್ತಾ, ಅವರು ಹೇಳಿದ್ದಿಷ್ಟು, “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಭಾರತದ ಎಲ್ಲಾ ರಾಜ್ಯಗಳ ಪ್ರಮುಖ ವಿರೋಧ ಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು “ಇಂಡಿಯಾ ರಕ್ಷಿಸಿ” ಅಭಿಯಾನಕ್ಕೆ ಬೆಂಗಳೂರು ಸಾಕ್ಷಿಯಾಯಿತು. ಇಡೀ ‘ಇಂಡಿಯಾ’ಕ್ಕೆ ಕರ್ನಾಟಕ ಆತ್ಮವಿಶ್ವಾಸ ನೀಡಿದೆ.
‘ಇಂಡಿಯಾ’ ಸಭೆಯ ನಂತರ ನಮ್ಮ ಪಕ್ಷದ ಎಲ್ಲಾ ರಾಜ್ಯಗಳ ನಾಯಕರನ್ನು ಕರೆದ ಉನ್ನತ ನಾಯಕರು ಕರ್ನಾಟಕ ಮಾದರಿಯನ್ನು ಅನುಕರಿಸಿ ಎಂದು ಹೇಳಿದ್ದಾರೆ. ಎಲ್ಲ ವೈಮನಸ್ಸು, ವ್ಯಕ್ತಿ ಪ್ರತಿಷ್ಠೆ ಬಿಟ್ಟು, ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎಂದು ದುಡಿಯುವುದೇ ಕರ್ನಾಟಕ ಮಾದರಿ ಎಂದು ಕಿವಿ ಮಾತು ಹೇಳಿದ್ದಾರೆ, ಇದು ನಮ್ಮ ಹೆಗ್ಗಳಿಕೆ ಎಂದು ಅವರು ಹೇಳಿದರು.
“ಕಾಂಗ್ರೆಸ್ ಪಕ್ಷ 136 ಸ್ಥಾನ ಗೆಲ್ಲುತ್ತದೆ ಎಂದು ಹೇಳಿದ್ದೆ ಸುಮಾರು ಜನ ನಂಬಲಿಲ್ಲ, ಪ್ರತಿಪಕ್ಷದವರು ಸಮ್ಮಿಶ್ರ ಸರ್ಕಾರ ಬಂದು ಬಿಡುತ್ತದೆ ಎಂದು ಮುಂಚಿತವಾಗಿಯೇ ಕಾಲಿಗೆ ಬಿದ್ದು ಸರ್ಕಾರ ಮಾಡಲು ತಯಾರಾಗಿದ್ದರು. ಆದರೆ ನನ್ನ ನಂಬಿಕೆ ಸುಳ್ಳಾಗಲಿಲ್ಲ. ಯಾರೋ ನಾಯಕರೊಬ್ಬರು ನಾನು ಮಾಟ ಮಂತ್ರ ಮಾಡಿದ್ದೇನೆ ಹೇಳಿದ್ದಾರೆ. ಗೆಲುವಿಗೆ ಕಾರಣ ಮಾಟಮಂತ್ರವಲ್ಲ, ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆಳಗಾವಿಯ ಕಾಂಗ್ರೆಸ್ ಬಾವಿ ಬಳಿ ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿದ್ದೆವು. ಆ ಬಾವಿಯ ನೀರಿನಿಂದ ರಸ್ತೆ ಸ್ವಚ್ಛಗೊಳಿಸಿ ಈ ರಾಜ್ಯಕ್ಕೆ ಅಂಟಿರುವ ದರಿದ್ರ ಕೊಳೆ ಹೋಗಲಿ ಎಂದು ಕೆಲಸ ಪ್ರಾರಂಭ ಮಾಡಿದ್ದೆವು ಅದರಂತೆ ಬದಲಾವಣೆ ಆಗಿದೆ” ಎಂದರು.
ರಾಜೀವ್ ಗಾಂಧಿ ಅವರ ಜನ್ಮ ದಿನದಂದು ಗೃಹಲಕ್ಷ್ಮಿ:
“ಆಗಸ್ಟ್ 20 ರಂದು ಪ್ರತಿಯೊಂದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಮಟ್ಟದಲ್ಲಿ, ಮಹಾನಗರ ಪಾಲಿಕೆಯ ವಾರ್ಡ್ ಮಟ್ಟದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳನ್ನು ಸೇರಿಸಿ ಪಕ್ಷಾತೀತವಾಗಿ ಸಂಭ್ರಮಾಚರಣೆ ಮಾಡುವಂತೆ ಸೂಚಿಸಿದ್ಧೇವೆ. 1 ಕೋಟಿ 28 ಲಕ್ಷ ಮಹಿಳೆಯರ ಅರ್ಜಿಗಳನ್ನು ಪರಿಗಣಿಸಿದ್ದೇವೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
“ಬಿಜೆಪಿ, ಜೆಡಿಎಸ್ ಮತದಾರರ ಹೃದಯ ಗೆಲ್ಲಬೇಕು: ಮುಂದೆ ಲೋಕಸಭಾ ಚುನಾವಣೆ ಇದೆ. ನಮ್ಮ ಯೋಜನೆಗಳ ಲಾಭವನ್ನು ಬಿಜೆಪಿ ಮತದಾರರೂ ಪಡೆಯುತ್ತಿದ್ದಾರೆ. ಅಂತಹವರ ಹೃದಯ ಗೆಲ್ಲಬೇಕು, ಕರ್ನಾಟಕದಲ್ಲಿ ದ್ವೇಷ, ಅಸೂಯೆ ರಾಜಕಾರಣಕ್ಕೆ ಅವಕಾಶವಿಲ್ಲ, ಎಲ್ಲರೂ ನಮ್ಮವರೇ, ಆ ನಿಟ್ಟಿನಲ್ಲಿ ಎಲ್ಲಾ ನಾಯಕರು, ಕಾರ್ಯಕರ್ತರು ಕೆಲಸ ಮಾಡಬೇಕು. ನಮ್ಮ ಗುರಿ ಕೇವಲ 2024 ಮಾತ್ರವಲ್ಲ 2028 ಕೂಡ ಇರಬೇಕು” ಎಂದು ಅವರು ಕಿವಿಮಾತು ಹೇಳಿದರು.
ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಸ್ಥಾನ:
ನಿಗಮ ಮಂಡಳಿ ಸೇರಿದಂತೆ ಇತರ ಅಧ್ಯಕ್ಷ, ಸದಸ್ಯ ಸ್ಥಾನಗಳಿಗೆ ಯಾರನ್ನೆಲ್ಲ ನೇಮಕ ಮಾಡುವುದಿಲ್ಲ, ಯಾವ ನಾಯಕರು ಪಕ್ಷಕ್ಕಾಗಿ ದುಡಿದಿದ್ದಾರೋ ಅವರಿಗೆ ಮೊದಲ ಆದ್ಯತೆ ಜೊತೆಗೆ ರಂದೀಪ್ ಸುರ್ಜೇವಾಲ ಅವರು ಸೂಚನೆ ನೀಡಿದ್ದಾರೆ ಬೂತ್ ಮಟ್ಟದಲ್ಲಿ ಎಷ್ಟು ಮತಗಳನ್ನು ಪಕ್ಷಕ್ಕೆ ತಂದಿದ್ದಾರೋ ಅಂತಹ ನಾಯಕರಿಗೆ ಮೊದಲು ಪ್ರಾಶಸ್ತ್ಯ ನೀಡಿ ಎಂದಿದ್ದಾರೆ ಅದರಂತೆ ನಡೆಯುತ್ತೇವೆ” ಎಂದು ಸ್ಪಷ್ಟಪಡಿಸಿದರು.
“ಕೊರೊನಾ ಸಮಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿ, ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಜನರ ಸೇವೆಗೆ ಕಳುಹಿಸಿ ಜೀವ ಒತ್ತೆ ಇಟ್ಟು ಪಕ್ಷ ಕಟ್ಟಿದ್ದೇವೆ. ಸ್ವಾತಂತ್ರ್ಯ ಅಮೃತ ಮಹೋತ್ಸವ, ಮೇಕೆದಾಟು ಪಾದಯಾತ್ರೆ ರಾಜ್ಯದ ಇತಿಹಾಸದಲ್ಲಿ ದಾಖಲಾಗುವಂತಹ ಸಂಗತಿಗಳು, ಭಾರತ್ ಜೋಡೋ ಸಂದರ್ಭದಲ್ಲಿ ಬದನವಾಳುವಿನಲ್ಲಿ ಸವರ್ಣೀಯರು ಮತ್ತು ದಲಿತರ ಮದ್ಯೆ ಇದ್ದಂತಹ ಕಂದಕವನ್ನು ಮುಚ್ಚಿದ್ದೇವೆ ಇದು ಕಾಂಗ್ರೆಸ್ ಪಕ್ಷದ ಸಾಧನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ