ಪ್ರಗತಿವಾಹಿನಿ ಸುದ್ದಿ; ದೊಡ್ಡಬಳ್ಳಾಪುರ: ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆ, ಮುಂಬರುವ ವಿಧನಸಭಾ ಚುನಾವಣೆಗೆ ಬಲ ಪ್ರದರ್ಶನ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಬಿಜೆಪಿ ಜನಸ್ಪಂದನಾ ಸಮಾವೇಶದಲ್ಲಿ ವೇದಿಕೆ ಮೇಲೆ ಬಿಜೆಪಿ ಸಚಿವರು, ಶಾಸಕರು ಭರ್ಜರಿ ಸ್ಟೆಪ್ ಹಾಕಿ ಡಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ಬಿಜೆಪಿ ಜನಸ್ಪಂದನಾ ಸಮಾವೇಶ ಉದ್ಘಾಟನಾ ಕಾರ್ಯಕ್ರಮದ ಮೊದಲು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಹಲವು ಗಾಯಕರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮನದಲ್ಲಿ ಮೇಲ್ಯಾವುದೋ…. ಎಂಬ ವಿಜಯ್ ಪ್ರಕಾಶ್ ಹಾಡಿಗೆ ಸಚಿವ ಎಂ.ಟಿ.ಬಿ ನಾಗರಾಜ್, ಶಾಸಕ ಎಸ್.ಆರ್.ವಿಶ್ವನಾಥ್ ವೇದಿಕೆ ಮೇಲೆ ಭರ್ಜರಿ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ ನೃತ್ಯಕ್ಕೆ ಸಚಿವ ಮುನಿರತ್ನ ಕೂಡ ಹೆಜ್ಜೆ ಹಾಕುವ ಮೂಲಕ ಸಾಥ್ ನೀಡಿದ್ದಾರೆ.
ಒಂದೆಡೆ ರಾಜ್ಯದಲ್ಲಿ ಭಾರಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿಯುಂಟಾಗಿದೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹದ ಹೊಡೆತಕ್ಕೆ ಸಿಲಿಕಾನ್ ಸಿಟಿ ಜನತೆಯ ಬದುಕು ಮೂರಾಬಟ್ಟೆಯಾಗಿದ್ದು, ಜನರು ಸಂಕಷ್ಟದಿಂದ ಕಣ್ಣೀರಿಡುತ್ತಿದ್ದಾರೆ. ಹಲವೆಡೆ ಬಡಾವಣೆಗಳು, ರಸ್ತೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಆಹಾರ, ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಬಿಟ್ಟು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನಾ ಸಮಾವೇಶ ಮಾಡುತ್ತಿರುವುದೂ ಅಲ್ಲದೇ, ಸಚಿವರು, ಶಾಸಕರು ವೇದಿಕೆ ಮೇಲೆ ಡಾನ್ಸ್ ಮಾಡಿ ಕುಣಿದು ಕುಪ್ಪಳಿಸುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಜನರು ನೀರಿನಲ್ಲಿ ಮುಳುಗುತ್ತಿದ್ದರೆ, ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸಮಾವೇಶದ ಹೆಸರಲ್ಲಿ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಜನರು ಸಮಸ್ಯೆಯಲ್ಲಿ ಕಣ್ಣೀರಿಡುತ್ತಿರುವಾಗ ಸರ್ಕಾರಕ್ಕೆ ಇಂತಹ ಸಮಾವೇಶದ ಅಗತ್ಯವಾದರೂ ಏನಿತ್ತು? ಎಂಬುದು ಪ್ರಶ್ನೆ.
ಇನ್ನು ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಡಾ.ಸುಧಾಕರ್, ವಿ.ಸೋಮಣ್ಣ ಸೇರಿದಂತೆ ಹಲವು ನಾಯಕರು ಈಗಗಲೇ ಸಮಾವೇಶದ ಸ್ಥಳಕ್ಕೆ ಆಗಮಿಸಿದ್ದಾರೆ.
ಆ ಭಾಗದಲ್ಲಿ ಅತ್ಯುತ್ತಮವಾಗಿ ಪಕ್ಷ ಸಂಘಟನೆಯಾಗಿದೆ; ಸಿಎಂ ಬೊಮ್ಮಾಯಿ
https://pragati.taskdun.com/politics/bjp-janaspandana-samaveshcm-basaaraj-bommaireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ