*ಬಿಜೆಪಿ ಶಾಸಕ ವಿಠಲ ಹಲಗೇಕರ್ ವಿರುದ್ಧ 600 ಕೋಟಿ ಅಕ್ರಮ ಆರೋಪ; ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ತಂಡ ರಚನೆ*
ಇಂದು ಕಾರ್ಖಾನೆಗೆ ಭೇಟಿ ನೀಡಲಿರುವ ತನಿಖಾ ತಂಡ
ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಖಾನಾಪುರ ಬಿಜೆಪಿ ಶಾಸಕ ವಿಠಲ ಹಲಗೇಕರ್ ವಿರುದ್ಧ 600 ಕೋಟಿ ಅಕ್ರಮ ಆರೋಪ ಕೇಳಿಬಂದಿದ್ದು, ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ.
ಖಾನಾಪುರದ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಶಾಸಕ ವಿಠಲ ಹಲಗೇಕರ್ ಲೀಸ್ ಆಧಾರದ ಮೇಲೆ ಪಡೆದು, ಕಾರ್ಖಾನೆಯಲ್ಲಿ ಸಹಕಾರಿ ಬ್ಯಾಂಕ್ ಹಣ ತೊಡಗಿಸಿ ಬಳಿಕ ಕಾರ್ಖಾನೆಯಿಂದ ಈ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಬರೋಬ್ಬರಿ 600 ಕೋಟಿ ರೂಪಾಯಿ ಗೋಲ್ ಮಾಲ್ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಖಾನಾಪುರ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ನೀಡಿದ ದೂರಿನ ಮೇರೆಗೆ ಸರ್ಕಾರ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ.
ಶಾಸಕ ವಿಠಲ ಹಲಗೇಕರ್ ವಿರುದ್ಧದ ಅಕ್ರಮದ ಬಗ್ಗೆ ತನಿಖೆ ನಡೆಸಿ 30 ದಿನಗಳ ಒಳಗೆ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಜಿಲ್ಲಾ ನಿವೃತ್ತ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಅವರ ತನಿಖಾ ತಂಡ ಖಾನಾಪುರ ಭಾಗ್ಯಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ಆರಂಭಿಸಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ