Kannada NewsLatestNationalPolitics

*ರಾಹುಲ್ ಗಾಂಧಿ ಆಪ್ತ ಎಂದು ನಂಬಿಸಿ ರಾಜಕೀಯ ನಾಯಕರಿಗೆ ಕೋಟ್ಯಂತರ ರೂಪಾಯಿ ವಂಚನೆ: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆಪ್ತ ಎಂದು ಹೇಳಿಕೊಂಡು ರಾಜಕೀಯ ನಾಯಕರಿಗೆ ವಂಚಿಸುತ್ತಿದ್ದ ಅಂತಾರಾಜ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಾಖಂಡದ ಡೆಹ್ರಾಡೂನ್ ಪೊಲೀಸರು ಈ ಬೃಹತ್ ಜಾಲವನ್ನು ಬೇಧಿಸಿದ್ದು, ಆಪರೇಷನ್ ಪ್ರಹಾರ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಓರ್ವ ಆರೋಪಿಯನ್ನು ಬಂಧಿಸಿದ್ದು, ಬಂಧಿತನನ್ನು ಅಮೃತಸರದ ಗೌರವ್ ಕುಮಾರ್ ಎಂದು ಗುರುತಿಸಲಾಗಿದೆ.

ಉತ್ತರಾಖಂಡದ ಕಾಂಗ್ರೆಸ್ ನಾಯಕಿ ಭಾವನಾ ಪಾಂಡೆ ಅವರು ಮೇ 3 ರಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಜಾಲವನ್ನು ಪತ್ತೆ ಮಾಡಲಾಗಿದೆ. ರಾಹುಲ್ ಗಾಂಧಿಯವರ ಸಹಾಯಕ ಕಾನೀಶ್ ಸಿಂಗ್ ಎಂದು ಹೇಳಿಕೊಂಡಿದ್ದ ಗೌರವ್ ಕುಮಾರ್, ಪಕ್ಷದೊಳಗೆ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ ಭಾವನಾ ಅವರಿಂದ 25 ಲಕ್ಷ ರೂಪಾಯಿ ಪಡೆದು ಫೋನ್ ಸ್ವಿಚ್ ಆಫ್ ಮಾಡಿದ್ದ. ವಿಶ್ವಾಸಾರ್ಹತೆ ಹೆಚ್ಚಿಸಲು ಟ್ರೂಕಾಲರ್‌ನಲ್ಲಿ ಕನಿಷ್ಕ್ ಸಿಂಗ್ ಎಂಬ ನಕಲಿ ಪ್ರೊಫೈಲ್ ಬಳಸುತ್ತಿದ್ದ.

ರಾಜಕೀಯ ವೆಬ್‌ಸೈಟ್‌ಗಳಿಂದ ಉತ್ತರಾಖಂಡ, ರಾಜಸ್ಥಾನ ಮತ್ತು ಬಿಹಾರದ ಪ್ರಭಾವಿ ನಾಯಕರ ಮಾಹಿತಿಯನ್ನು ಕಲೆಹಾಕುತ್ತಿದ್ದ. ಹೈಕಮಾಂಡ್‌ನೊಂದಿಗೆ ನೇರ ಸಂಪರ್ಕವಿದೆ ಎಂದು ಬಿಂಬಿಸಿಕೊಂಡು, ಚುನಾವಣಾ ಟಿಕೆಟ್ ಅಥವಾ ಉನ್ನತ ಹುದ್ದೆಗಳ ಆಸೆ ತೋರಿಸಿ ಹಣ ಪಡೆಯುತ್ತಿದ್ದ.

ಪೊಲೀಸ್ ವಿಚಾರಣೆಯ ವೇಳೆ ಆರೋಪಿಯು ತನ್ನ ವಂಚನೆಯನ್ನು ಒಪ್ಪಿಕೊಂಡಿದ್ದಾನೆ. ಜೈಪುರದಲ್ಲಿ ಇಬ್ಬರು ರಾಜಕಾರಣಿಗಳಿಗೆ ಕ್ರಮವಾಗಿ 1.90 ಕೋಟಿ ರೂ. ಮತ್ತು 12 ಲಕ್ಷ ರೂ. ವಂಚನೆ ಮಾಡಿದ್ದಾನೆ. ಪಾಟ್ನಾ ಮೂಲದ ನಾಯಕನಿಂದ 3 ಲಕ್ಷ ರೂ. ಲೂಟಿ, ಡೆಹ್ರಾಡೂನ್​ನ ಭಾವನಾ ಪಾಂಡೆ ಅವರಿಗೆ 25 ಲಕ್ಷ ರೂ. ವಂಚನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಡೆಹ್ರಾಡೂನ್‌ನ ಮಾಲ್‌ ಒಂದರಲ್ಲಿ ಮತ್ತೊಬ್ಬ ನಾಯಕನಿಂದ ಹಣ ಸಂಗ್ರಹಿಸಲು ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸರು ಸಿಸಿಟಿವಿ ಮತ್ತು ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಆರೋಪಿಯನ್ನು ಸೆರೆಹಿಡಿಯಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button