ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 2 ಕೋಟಿ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪ್ರಭಾಕರ್ ಪಿ ಎಂದು ಗುರುತಿಸಲಾಗಿದೆ. ಈತ ಪಿಯುಸಿ, ಎಸ್ ಎಸ್ ಎಲ್ ಸಿ ಬೋರ್ಡ್ ಚೀಫ್ ಆಫಿಸರ್, ಇಂಡಿಯನ್ ಪೋಸ್ಟ್ ಕಂಟ್ರೋಲರ್, ಬೆಂಗಳೂರು ವಿಶ್ವವಿದ್ಯಾಲಯ, ವಿಟಿಯುನ ಆಫೀಸರ್ ಎಂದು ನಕಲಿ ಹುದ್ದೆಗಳ ಸೋಗಿನಲ್ಲಿ ನಿರುದ್ಯೋಗಿ ಯುವತಿ-ಯುವಕರನ್ನು ವಂಚಿಸುತ್ತಿದ್ದ.
ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಂದ ಹಣ ಪಡೆದು ವಂಚಿಸಿದ್ದ ಪ್ರಭಾಕರ್, ಕೋಟಿ ಕೋಟಿ ವಂಚನೆ ಹಣದಲ್ಲಿ ಹೆಲಿಕ್ಯಾಪ್ಟರ್ ಬಾಡಿಗೆ ಪಡೆದು ಕುಟುಂಬ ಸಮೇತ ಟೂರ್ ಮಾಡುತ್ತಿದ್ದ ಎನ್ನಲಾಗಿದೆ. ಚಿಕ್ಕಮಗಳೂರಿನ ಉಮೇಶ್ ಎಂಬುವವರು ಪ್ರಭಾಕರ್ ತಮಗೆ 7 ಲಕ್ಷ ರೂ ವಂಚಿಸಿರುವ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ವಂಚಕನ ಅಸಲಿ ಬಣ್ಣ ಬಯಲಾಗಿದ್ದು, ಇದೀಗ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ