
ಪ್ರಗತಿವಾಹಿನಿ ಸುದ್ದಿ: ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗಬಹುದು. ಈ ಮಗು ಬೇಡವೇ ಬೇಡ ಎಂದು ನಿರ್ಧರಿಸಿದ ತಾಯಿ ಮಗುವನ್ನು ಸರೋವರಕ್ಕೆ ಎಸೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಶುಕ್ಲಾಪುರ ನಿವಾಸಿ ಅಂಜಲಿ ಸಿಂಗ್ ಅಲಿಯಾಸ್ ಪ್ರಿಯಾ ಎನ್ನಲಾಗಿದೆ.
ಅಂಜಲಿ ಅಲಿಯಾಸ್ ಪ್ರಿಯಾ ತನ್ನ ಮೂರು ವರ್ಷದ ಮಗಳನ್ನು ಸರೋವರಕ್ಕೆ ಎಸೆದು ಕೊಂದಿರುವ ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮೂಲದವಳಾದ ಅಂಜಲಿ ಈ ಹಿಂದೆ ಓರ್ವನನ್ನು ಮದುವೆಯಾಗಿದ್ದು ಮೂರು ವರ್ಷದ ಹೆಣ್ಣು ಮಗಳಿದ್ದಾಳೆ. ಈ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿ ಬೇರ್ಪಟ್ಟಿದ್ದಾರೆ. ಇದಾದ ಬಳಿಕ ಅಂಜಲಿ ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಗೆಳೆಯ ಅಖಿಲೇಶ್ ಜೊತೆಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು. ಆದರೆ ಅಖಿಲೇಶ್ ಗೆ ಮಗುವನ್ನು ತನ್ನ ಜೊತೆ ಇರಿಸಿಕೊಳ್ಳುವುದು ಇಷ್ಟವಿರಲಿಲ್ಲ. ಈ ವಿಚಾರವನ್ನು ಅಂಜಲಿ ಬಳಿ ಅಖಿಲೇಶ್ ಹೇಳಿಕೊಂಡಿದ್ದನಂತೆ.
ಸರೋವರದ ಬಳಿ ಆರೋಪಿ ಅಂಜಲಿ ಪೊಲೀಸರಿಗೆ ಕಾಣಿಕೊಂಡಿದ್ದಾಳೆ. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಹಿಳೆಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುವುದನ್ನು ಕಂಡು ವಿಚಾರಿಸಿದ್ದಾರೆ. ಬಳಿಕ ಸರೋವರದ ಬಳಿ ಸಿಸಿ ಕ್ಯಾಮರಾ ಪರಿಶೀಲಿಸಿದ್ದು, ಕೃತ್ಯ ಬಯಲಿಗೆ ಬಂದಿದೆ. ಬಳಿಕ ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ.