ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ಸಿಎಂ ಬಸವರಾಜ್ ಬೊಮ್ಮಾಯಿ ತೆರಳಿದ್ದು, ಸಿಎಂ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಇಂದು ಸಚಿವ ಸಂಪುಟ ರಚನೆ ಫೈನಲ್ ಮಾಡಲಿದ್ದಾರೆ. ಈ ನಡುವೆ ಜೆ.ಪಿ.ನಡ್ಡಾ ಹಾಗೂ ಸಿಎಂ ಬೊಮ್ಮಾಯಿ ಭೇಟಿ ಮತ್ತಷ್ಟು ವಿಳಂಬವಾಗಿದೆ. ಮೊದಲು ಬೆಳಿಗ್ಗೆ 9 ಗಂಟೆಗೆ ಭೇಟಿಗೆ ಸಮಯ ನಿಗದಿಯಾಗಿತ್ತು. ನಂತರ 11 ಗಂಟೆಗೆ ಮುಂದೂಡಲಾಯಿತು. ಇದೀಗ ಸಂಜೆ ವೇಳೆಗೆ ಸಿಎಂ ಬೊಮ್ಮಾಯಿ, ನಡ್ಡಾ ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ನಡ್ಡಾ ಭೇಟಿ ಸಮಯ ಮುಂಡೂಡಿಕೆಯಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳು ಸಿಎಂ ಬೊಮ್ಮಾಯಿ ಭೇಟಿಯಾಗಿ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಶಾಸಕರಾದ ರಾಜುಗೌಡ, ಸತೀಶ್ ರೆಡ್ಡಿ, ಸಿ.ಸಿ.ಪಾಟೀಲ್, ಅರವಿಂದ್ ಬೆಲ್ಲದ್, ಲಕ್ಷ್ಮಣ ಸವದಿ ಸೇರಿದಂತೆ ಹಲವರು ಸಿಎಂ ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.
ಈ ಮಧ್ಯೆ ಬೊಮ್ಮಾಯಿ ನಿನ್ನೆ ರಾತ್ರಿ ಸುಮಾರು 3 ಗಂಟೆಗಳಷ್ಟು ಸಮಯ ಅಜ್ಞಾತ ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ. ನೂತನ ಸಚಿವಸಂಪುಟ ರಚನೆಗೆ ಹೈಕಮಾಂಡ್ ಇಂದೇ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ