
ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಪ್ರವಾಸೋದ್ಯಮ ಜಾಲವನ್ನು ರೂಪಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ವಿಶ್ವದಲ್ಲಿ ವಿವಿಧ ದೇಶಗಳಲ್ಲಿ ತಮ್ಮ ಸಂಸ್ಕೃತಿ ಮತ್ತು ಪ್ರವಾಸಿ ಸ್ಥಳಗಳನ್ನು ಪರಿಚಯಿಸಲು ಸರ್ಕ್ಯೂಟ್‌ಗಳನ್ನು ರೂಪಿಸಿ ಪ್ರಚಾರ ನೀಡುವ ಮಾದರಿಯಿದೆ. ಈಗ ಅದೇ ಮಾದರಿಯಲ್ಲಿ ದಸರಾ ಹಬ್ಬಕ್ಕೂ ಅಂತರರಾಷ್ಟ್ರೀಯ ಸರ್ಕ್ಯೂಟ್ ನ್ನು ರೂಪಿಸಲಾಗುವುದು ಎಂದರು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಿ ಚರ್ಚಿಸಲಾಗುವುದು ಎಂದರು.
ನಾಡಹಬ್ಬ ಜನರಲ್ಲಿ ಉತ್ಸಾಹ ತುಂಬಬೇಕು. ಸರಿಯಾಗಿ ಮಳೆ ಬೆಳೆಯಾಗಿ, ಬೆಳೆದ ಬೆಳೆಗೆ ಬೆಲೆ ದೊರೆತು, ರೈತರ ಮಕ್ಕಳು ವಿದ್ಯಾಭ್ಯಾಸ ಪಡೆದಾಗ ಅದು ನಿಜವಾದ ದಸರಾ ಆಗುತ್ತದೆ. ಸಂಭ್ರಮದ ಆಚರಣೆ ಆಗಬೇಕಾದರೆ ನಾಡು ಸುಭಿಕ್ಷವಾಗಬೇಕು ಎಂದರು.
ಉದ್ಘಾಟನೆ ಮಾಡಿದವರೆಲ್ಲರೂ ಸರ್ವಶ್ರೇಷ್ಠರು:
ಕನ್ನಡಿಗರು ಹೃದಯ ಶ್ರೀಮಂತಿಕೆವುಳ್ಳವರು. ಕನ್ನಡಿಗರು ಎಲ್ಲರನ್ನೂ ಒಪ್ಪಿಕೊಳ್ಳುವ ಗುಣವುಳ್ಳವರು. ಎಸ್ ಎಂ.ಕೃಷ್ಣ ಅವರ ಆಯ್ಕೆಯನ್ನು ಕನ್ನಡಿಗರು ಒಪ್ಪಿಕೊಂಡಿದ್ದಾರೆ ಎಂದ ಮುಖ್ಯಮಂತ್ರಿಗಳು, ಇದುವರೆಗೆ ನಾಡ ಹಬ್ಬವನ್ನು ಉದ್ಘಾಟನೆ ಮಾಡಿದವರೆಲ್ಲರೂ ಸರ್ವಶ್ರೇಷ್ಠರು ಎಂದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಯಶಸ್ವಿನಿ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಸ್ಥಾಪನೆಯಲ್ಲದೆ, ಐ.ಟಿ.ಬಿ.ಟಿ ಗೆ ನೀಡಿದ ಕೊಡುಗೆಯಿಂದಾಗಿ ಇಡೀ ದೇಶವಿದೇಶಗಳಲ್ಲಿ ಬೆಂಗಳೂರು ಜನರನ್ನು ಆಕರ್ಷಿಸುವಂತಾಗಿದೆ ಎಂದರು.
ತಾವು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಕೆ.ಆರ್.ಎಸ್ ಅಣೆಕಟ್ಟಿನ ಹಳೆಯದಾಗಿದ್ದ 16 ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಲಾಯಿತು. ಇನ್ನೂ 5 ಗೇಟ್ ಗಳನ್ನು ಶೀಘ್ರದಲ್ಲಿಯೇ ಬದಲಾಯಿಸಲಾಗುವುದು ಎಂದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ 14 ಮಹರಾಜರು ಕಟ್ಟಿದ್ದ ಅಣೆಕಟ್ಟುಗಳಿವೆ. ಅವೆಲ್ಲವೂ ಶಿಥಿಲಗೊಂಡಿದ್ದು, ನಾಲೆಗಳು ಮುಚ್ಚಿಹೋಗಿದ್ದವು. 97 ಸಾವಿರ ಎಕರೆ ನೀರಾವರಿಗೆ ಬಳಕೆಯಾಗುತ್ತಿದ್ದ 11 ಅಣೆಕಟ್ಟುಗಳ ನಾಲೆಗಳನ್ನು ಸಂಪೂರ್ಣವಾಗಿ ಆಧುನೀಕರಣ ಮಾಡಿದ ತೃಪ್ತಿಯಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದು, ಕೋವಿಡ್ ಸಂದರ್ಭದಲ್ಲಿಯೂ ಆರ್ಥಿಕ ಪ್ರಗತಿ ಸಾಧಿಸಿ ಜನಕಲ್ಯಾಣವನ್ನು ಕೈಗೊಳ್ಳಲಾಗುತ್ತಿದೆ ಎಂದ ಮುಖ್ಯಮಂತ್ರಿಗಳು ಸ್ವಚ್ಛ , ದಕ್ಷ ಆಡಳಿತವನ್ನು ನೀಡುವ ಮೂಲಕ ಇವನ ನೀಡಲಾಗುವುದು. ಕರ್ನಾಟಕದಲ್ಲಿ ಹೊಸ ಅಭಿವೃದ್ಧಿಯ ಯುಗವನ್ನು ಪ್ರಾರಂಭಿಸಲಾಗುವುದೆಂದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಕರ್ನಾಟಕದಿಂದ 15 ಜನ: ಬೆಳಗಾವಿಯಿಂದ ಒಬ್ಬರಿಗೆ ಸ್ಥಾನ