Latest

ಸಂಭಾವ್ಯ ಸಚಿವರ ಪಟ್ಟಿ ಹೈಕಮಾಂಡ್ ಕೈಯಲ್ಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮಂತ್ರಿ ಸ್ಥಾನಕ್ಕಾಗಿ ಹಲವರು ವರಿಷ್ಠರ ಮೂಲಕವೇ ನೇರವಾಗಿ ಲಾಬಿ ನಡೆಸಿದ್ದಾರೆ.

ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಬಸವರಾಜ್ ಬೊಮ್ಮಾಯಿ ಇಂದು ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದು, ಈ ವೇಳೆ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ಮಾಹಿತಿಯ ಪ್ರಕಾರ ಕರ್ನಾಟಕದ ಸಂಭಾವ್ಯ ಸಚಿವರ ಪಟ್ಟಿ ಈಗಾಗಲೆ ಹೈಕಮಾಂಡ್ ಕೈಯಲ್ಲಿದೆ. ಹೈಕಮಾಂಡ್ ತಾನೇ ಮುಂದಾಗಿ ಈ ಪಟ್ಟಿಯನ್ನು ತಯಾರಿಸಿದೆಯೋ ಅಥವಾ ಬೊಮ್ಮಾಯಿ ತಾವೇ ಖುದ್ದಾಗಿ ಪಟ್ಟಿ ಸಿದ್ದಪಡಿಸಿ ಹೈಕಮಾಂಡ್ ಕೈಯಲ್ಲಿಟ್ಟಿದ್ದಾರೋ ಎನ್ನುವುದು ಬಹಿರಂಗವಾಗಿಲ್ಲ.

ಈ ಭೇಟಿಯಲ್ಲಿ ಸಚಿವಸಂಪುಟ ವಿಷಯ ಚರ್ಚಿಸುವುದಿಲ್ಲ, ಇನ್ನು 3-4 ದಿನದಲ್ಲಿ ಮತ್ತೊಮ್ಮೆ ಸಮಯ ತೆಗೆದುಕೊಂಡು ದೆಹಲಿಗೆ ಹೋಗಿ ಸಚಿವರ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದರು. ಆದರೆ ಮೂಲಗಳ ಪ್ರಕಾರ ಸಚಿವರ ಪಟ್ಟಿಯೊಂದು ಹೈಕಮಾಂಡ್ ಕೈ ಸೇರಿದೆ. ಅದಕ್ಕೆ ಅಂತಿಮ ಮುದ್ರೆ ಒತ್ತಿ ಮುಖ್ಯಮಂತ್ರಿಗಳ ಕೈಗಿಡುವುದೊಂದೇ ಬಾಕಿ ಇದೆ.

Home add -Advt

ಸಿಎಂ ದೆಹಲಿ ಭೇಟಿಗೂ ಮೊದಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಚಿವಾಕಾಂಕ್ಷಿಗಳು ಮಂತ್ರಿ ಸ್ಥಾನಕ್ಕಾಗಿ ವರಿಷ್ಠರ ಮೂಲಕವೇ ಒತ್ತಡ ಹೇರುವ ತಂತ್ರ ರೂಪಿಸಿದ್ದಾರೆ. ಬೊಮ್ಮಾಯಿ ಭೇಟಿ ವೇಳೆ ಹಲವು ನಾಯಕರ ಹೆಸರನ್ನು ಹೈಕಮಾಂಡ್ ಸೂಚಿಸಿದ್ದು, ಸಂಭಾವ್ಯ ಸಚಿವರ ಪಟ್ಟಿ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.

ಸ್ವಚ್ಛ ಹಾಗೂ ಸುಭದ್ರ ಆಡಳಿತಕ್ಕೆ ಪ್ರಧಾನಿ ಮೋದಿ ಸೂಚಿಸಿದ್ದು, ಒಂದು ವಾರದೊಳಗೆ ಸಂಪುಟ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ. 17 ಶಾಸಕರ ಬಗ್ಗೆ ನಾನು ಏನೂ ಹೇಳುವುದಿಲ್ಲ, ಸಂಪುಟ ರಚನೆಯಲ್ಲಿ ಹಸ್ತಕ್ಷೇಪ ಮಾಡಲ್ಲ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ವಲಸಿಗ ಸಚಿವರಿಗೂ ಮಂತ್ರಿ ಸ್ಥಾನ ಕಳೆದುಕೊಳ್ಳುವ ಆತಂಕ ಶುರುವಾಗಿದೆ.

ಮೊದಲ ಹಂತದಲ್ಲಿ 20ಕ್ಕಿಂತ ಹೆಚ್ಚು ಜನರನ್ನು ಸಚಿವಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇಲ್ಲ. ಅಸಮಾಧಾನಿತರ ಸಂಖ್ಯೆ ಮತ್ತು ಸ್ಥಿತಿಗತಿ ನೋಡಿ 2ನೇ ಹಂತದಲ್ಲಿ ಮತ್ತಷ್ಟು ಜನರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಒಟ್ಟಾರೆ ನೂತನ ಸಚಿವ ಸಂಪುಟದಲ್ಲಿ ಹಲವು ಘಟಾನುಘಟಿ ನಾಯಕರನ್ನು ಕೈಬಿಟ್ಟು, ಹೊಸ ಮುಖ ಹಾಗೂ ಯುವ ನಾಯಕರಿಗೆ ಆದ್ಯತೆ ನೀಡಲು ಚಿಂತಿಸಲಾಗಿದೆ.

ಬಸವರಾಜ ಬೊಮ್ಮಾಯಿ ಹೇಳಿದ 2 ಆದ್ಯತೆಯ ವಿಷಯಗಳು

ಬೊಮ್ಮಾಯಿ ಜೊತೆ ಗಂಟೆಗೂ ಹೆಚ್ಚು ಸಮಯ ಚರ್ಚಿಸಿದ ಪ್ರಧಾನಿ ಮೋದಿ! ; ಹುಬ್ಬಳ್ಳಿಗೆ ಏಮ್ಸ್ ಕೇಳಿದ ಸಿಎಂ

Related Articles

Back to top button