Latest

ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆ ಕಾಪಾಡಲು ಸಂಕಲ್ಪ ಮಾಡೋಣ: ಮುಖ್ಯಮಂತ್ರಿಗಳ ಕರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದ, ಏಕತೆ, ಅಖಂಡತೆ, ಸಮಗ್ರತೆ ನಮ್ಮ ಆದ್ಯತೆಯಾಗಿದ್ದು, ಇವುಗಳನ್ನು ಕಾಪಾಡಲು ಸಂಕಲ್ಪ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಅವರು ಇಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಷ್ಟ್ರೀಯ ಐಕ್ಯತಾ ದಿನಾಚರಣೆಯ ಅಂಗವಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಐಕ್ಯತಾ ಪ್ರಮಾಣವಚನವನ್ನು ಬೋಧಿಸಿದರು.

ನಂತರ ಮಾತನಾಡಿದ ಅವರು, ಹಲವಾರು ಭಾಷೆಗಳು, ಸಾಂಸ್ಕೃತಿಕ ಹಿನ್ನೆಲೆ ಮತ್ತು ಸಂಸ್ಕೃತಿಗಳಿಂದ ಕೂಡಿರುವ ದೇಶ. ಭಾರತ ಒಗ್ಗಟ್ಟಾಗಿ, ಒಕ್ಕೂಟವಾಗಿ, ಸ್ವತಂತ್ರವಾಗಿ 75 ವರ್ಷಗಳ ಕಾಲ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಬಂದಿರುವುದು ಬಹಳ ದೊಡ್ಡ ಸಾಧನೆ. ನಾವು ನಂಬಿರುವ ಸತ್ಯ ಮತ್ತು ಅಹಿಂಸೆ ಮುಂದುವರಿಯಬೇಕು. ಯಾವುದೇ ಸಾಮಾಜಿಕ, ಆರ್ಥಿಕ ,ರಾಜಕೀಯ, ಧಾರ್ಮಿಕ ಪರಿಸ್ಥಿತಿಯಲ್ಲಿ ಅಹಿಂಸೆಯ ಮಾರ್ಗವನ್ನು ತೊರೆಯದೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನೀತಿಯನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ.

ಭಾರತದ ಸ್ವಾತಂತ್ರ್ಯ ಹೋರಾಟ ಅಭೂತಪೂರ್ವವಾದದ್ದು ಹಾಗೂ ಹಲವಾರು ಆಯಾಮಗಳನ್ನು ಹೊಂದಿರುವ ಅತ್ಯಂತ ಶ್ರೇಷ್ಠವಾದ ಹೋರಾಟವೂ ಹೌದು. ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿ ಗಳಿಸಿದ ಸ್ವಾತಂತ್ರ್ಯ. ಕೇವಲ ಸ್ವಾತಂತ್ರ್ಯಕ್ಕಾಗಿ ಸ್ವತಂತ್ರವಲ್ಲ. ರಾಜಕೀಯ ಸ್ವಾತಂತ್ರ್ಯ ದೊರಕದಿದ್ದರೂ ಆರ್ಥಿಕ ಸ್ವತಂತ್ರ ಪಡೆದುಕೊಳ್ಳಲಿದ್ದೇವೆ ಎಂಬ ಸಂದೇಶವನ್ನು ಕಳಿಸಲಾಗಿತ್ತು.

ಶ್ರಮಿಕ ವರ್ಗದ ಹೋರಾಟ

ರೈತರು ಮತ್ತು ಕೂಲಿ ಕಾರ್ಮಿಕರು ಸಂಘಟಿತವಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಿದರು. ಬಾರ್ಡೋಲಿ ಮತ್ತು ಚಂಪಾರಣ್ ಸತ್ಯಾಗ್ರಹಕ್ಕೆ ಮಹಾತ್ಮ ಗಾಂಧಿವರು ಸಹ ಭೇಟಿ ನೀಡಿದ್ದರು. ಈ ಹೋರಾಟಕ್ಕೆ ದೊಡ್ಡ ಚಾಲನೆ ಸಿಕ್ಕು ಚಲೇ ಜಾವೋ ಚಳವಳಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅಂತಿಮ ಮೊಳೆಯನ್ನು ಹೊಡೆದದ್ದು ಇತಿಹಾಸ. ಹೀಗೆ ಗಳಿಸಿರುವ ಸ್ವತಂತ್ರವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಹಿರಿಯರ ತ್ಯಾಗ ಬಲಿದಾನದಿಂದ ಗಳಿಸಿರುವ ಸ್ವಾತಂತ್ರ್ಯವನ್ನು ಗಣತಂತ್ರವಾಗಿರುವ, ಪ್ರಜಾಪ್ರಭುತ್ವವನ್ನು ಒಪ್ಪಿರುವ ಹಾಗೂ ಸಂವಿಧಾನವನ್ನು ಕೊಟ್ಟಿರುವ ಭಾರತವನ್ನು ಯಶಸ್ವಿಯಾಗಿಸಬೇಕಾದದ್ದು ನಮ್ಮ ಜವಾಬ್ದಾರಿ ಎಂದರು.

ಎಲ್ಲಿ ಶಾಂತಿ ಇದೆ ಅಲ್ಲಿ ಪ್ರಗತಿ ಸಾಧ್ಯ. ಬಹಳಷ್ಟು ದೇಶಗಳು ಹಿಂಸೆಯಿಂದ ನಾಶವಾಗಿವೆ. ದೇಶದ ಐಕ್ಯತೆ, ಸಮಗ್ರತೆಯ ಜೊತೆಗೆ ಶಾಂತಿಯನ್ನು ಕಾಪಾಡಿಕೊಂಡು ,ಆರ್ಥಿಕ ಪ್ರಗತಿಯನ್ನು ತಂದು, ಪ್ರತಿಯೊಂದು ಕುಟುಂಬಕ್ಕೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಾಗ ಮಾತ್ರ ನಮ್ಮ ದೇಶ ಸ್ವಾವಲಂಬಿಯಾಗಿ, ಸ್ವಾಭಿಮಾನವುಳ್ಳ ದೇಶವಾಗುತ್ತದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಉತ್ತುಂಗಕ್ಕೆ ಏರಲು ಸಾಧ್ಯವಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ನವ ಕರ್ನಾಟಕದಿಂದ ನವ ಭಾರತ
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಅಖಂಡತೆ, ಏಕತೆ ಹಾಗೂ ಪ್ರಗತಿ ಸಾಧಿಸಲು ಹಲವಾರು ಪ್ರಯೋಗ ಮತ್ತು ಪ್ರಗತಿಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅವರಿಂದ ಭಾರತದ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೇರಿದೆ. ಅವರ ಕಾರ್ಯಕ್ರಮಗಳನ್ನು ಯಶಸ್ವಿ ಮಾಡುವ ಮೂಲಕ ಕೈಜೋಡಿಸೋಣ. ನವ ಕರ್ನಾಟಕದಿಂದ ನವ ಭಾರತ ನಮ್ಮ ಸರ್ಕಾರದ ಪರಿಕಲ್ಪನೆ. ಇದನ್ನು ಅಕ್ಷರಶಃ ಪಾಲಿಸೋಣ ಎಂದು ಕರೆ ನೀಡಿದರು. ಕರ್ನಾಟಕದ ಜನತೆ ದೇಶದ ಐಕ್ಯತೆ, ಅಖಂಡತೆ, ಶಾಂತಿ, ಪ್ರಗತಿಯನ್ನು ಕಾಪಾಡಿಕೊಳ್ಳಲು ಒಟ್ಟಾಗಿ ಶ್ರಮಿಸೋಣ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button