Latest

*ಉದಾತ್ತ ಚಿಂತನೆಯ ಫಲವಾಗಿ ತ್ರಿವಿಧ ದಾಸೋಹ; ಮುಗ್ಧತೆ ಹಾಗೂ ಆತ್ಮಸಾಕ್ಷಿಯಂತೆ ಆತ್ಮಬಲ ಸಾಧಿಸಿದವರು ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ; ತುಮಕೂರು: ಬಸವಣ್ಣನವರ ತತ್ವಾದರ್ಶಗಳ ಬಗ್ಗೆ ಚಿಂತನೆ ಅತ್ಯಗತ್ಯವಾಗಿದ್ದು, ಅಸಮಾನತೆ, ಲಿಂಗಭೇದ, ಮೇಲುಕೀಳುಗಳನ್ನು ಹೋಗಲಾಡಿಸಲು ನಾವೇನು ಮಾಡಬೇಕು ಎಂಬ ಬಗ್ಗೆ ಚಿಂತಿಸಬೇಕು. ಸಾಮಾಜಿಕ ಕ್ರಾಂತಿಯನ್ನುಂಟು ಮಾಡುವ ಕಾಯಕದಲ್ಲಿ ಮಠಗಳು ಮುಂಚೂಣಿಯಲ್ಲಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಪರಮಪೂಜ್ಯ ಡಾ: ಶ್ರೀ ಶಿವಕುಮಾರ ಸ್ವಾಮೀಜಿಗಳ 4 ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಮುಗ್ಧತೆ ಹಾಗೂ ಆತ್ಮಸಾಕ್ಷಿಯಿಂದ ಆತ್ಮಬಲ :
ಬದುಕಿನಲ್ಲಿ ಮುಗ್ಧತೆಯನ್ನು ಸದಾ ಕಾಯ್ದುಕೊಂಡು ಆತ್ಮಸಾಕ್ಷಿಯಿಂದ ನಡೆದುಕೊಳ್ಳುವುದು ಬಹಳ ಕಷ್ಟ. ಸತ್ಯವೆಂಬ ಸಾತ್ವಿಕ ವಿಚಾರವನ್ನಿಟ್ಟುಕೊಂಡು, ಲೌಕಿಕ ಲಾಭನಷ್ಟಗಳಿಂದ ದೂರವಿರುವವರು ಮಾತ್ರ ಆತ್ಮಸಾಕ್ಷಿಯಿಂದ ನಡೆದುಕೊಳ್ಳಲು ಸಾಧ್ಯ. ತಮ್ಮ ಬದುಕಿನುದ್ದಕ್ಕೂ ಮುಗ್ಧತೆ ಹಾಗೂ ಆತ್ಮಸಾಕ್ಷಿಯಂತೆ ನಡೆದುಕೊಂಡವರೇ ನಮ್ಮ ನಡೆದಾಡುವ ದೇವರಾದ ಶಿವಕುಮಾರ ಸ್ವಾಮೀಜಿಗಳು. ಪ್ರತಿನಿತ್ಯ ಪರೀಕ್ಷೆಗೆ ಒಳಪಟ್ಟು ಆತ್ಮಬಲ ಹೆಚ್ಚುವುದರಿಂದ ಪ್ರಕಾಶಮಯವಾದ ಆತ್ಮಬಲ ದೊರೆಯುತ್ತದೆ ಎಂದರು.

ಜ್ಞಾನವನ್ನು ಲೋಕಕಲ್ಯಾಣಕ್ಕಾಗಿ ಸಮರ್ಪಿಸುವುದೇ ಕಾಯಕ :
ಸ್ವಾಮಿ ವಿವೇಕಾನಂದರು ಅತಿ ಸಣ್ಣ ವಯಸ್ಸಿನಲ್ಲಿ ಮುಕ್ತಿಮಾರ್ಗವನ್ನು ಕಂಡುಕೊಂಡವರು.ಅವರ ಗುರು ಪರಮಹಂಸರು ಸಾಧನೆ ಒಬ್ಬರ ಸ್ವತ್ತಲ್ಲ. ನಿನ್ನ ಸಾಧನೆಯಿಂದ ಸಾವಿರಾರು ಜನ ಬೆಳಕು ಕಾಣುವಂತಾಗಬೇಕೆಂದು ಬೋಧಿಸಿದ್ದರ ಪರಿಣಾಮ ಸ್ವಾಮಿವಿವೇಕಾನಂದರು ವಿಶ್ವಗುರುವಾದರು. ಅದೇ ರೀತಿಯಲ್ಲಿ ಶಿವಕುಮಾರ ಸ್ವಾಮೀಜಿ ತಮ್ಮ ಜ್ಞಾನವನ್ನು ಲೋಕಕಲ್ಯಾಣಕ್ಕಾಗಿ ಅರ್ಪಿಸಿದ್ದಾರೆ. ನನಗಾಗಿ ದುಡಿಯುವುದು ಕರ್ತವ್ಯ ಆದರೆ ಲೋಕಕಲ್ಯಾಣಕ್ಕಾಗಿ ಸಮರ್ಪಿಸುವುದು ಕಾಯಕ ಎಂದರು.

ಉದಾತ್ತ ಚಿಂತನೆಯುಳ್ಳ ತ್ರಿವಿಧ ದಾಸೋಹ :
ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹಿಗಳು, ಕಾಯಕ ಯೋಗಿಗಳಾಗಿದ್ದಾರೆ. ಬಡಮಕ್ಕಳು ಶ್ರೀ ಕ್ಷೇತ್ರಕ್ಕೆ ಬಂದು ಅನ್ನ, ಆರೋಗ್ಯ, ವಿದ್ಯೆ, ಆಶ್ರಯ ಎಲ್ಲವನ್ನೂ ಪಡೆಯುತ್ತಿದ್ದಾರೆ. ಇದರೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ನೀಡುತ್ತಿದೆ. ಭಕ್ತರೇ ಮಠದ ಆಸ್ತಿ ಹಾಗೂ ಪರಮಾತ್ಮನೇ ಅಕ್ಷಯಪಾತ್ರೆ, ಎಲ್ಲ ಸೇವಾ ಕಾರ್ಯಗಳಿಗೆ ಶರಣರು, ದೀನದಲಿತರೇ ಒಡೆಯರು ಎಂದು ಶಿವಕುಮಾರ ಸ್ವಾಮೀಜಿಗಳು ಎಂದು ನಂಬಿದವರು. ಉದಾತ್ತ ಚಿಂತನೆಯ ಫಲವಾಗಿ ತ್ರಿವಿಧ ದಾಸೋಹ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದರು.

ರಾಜ್ಯ ಸರ್ಕಾರದ ವತಿಯಿಂದ ದಾಸೋಹ ದಿನ ಆಚರಣೆ :
ಸ್ವಾಮಿ ವಿವೇಕಾನಂದರು ನುಡಿದಂತೆ ಸಾಧಕನಿಗೆ ಸಾವು ಆಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಅಂತಹ ಸಾಧಕರಲ್ಲಿ ಶಿವಕುಮಾರ ಸ್ವಾಮಿಗಳು ಪ್ರಮುಖರಾಗಿದ್ದಾರೆ. ಭಕ್ತರಲ್ಲಿ ಅವರು ಜೀವಂತವಾಗಿದ್ದಾರೆ. ಶ್ರೀಮಠದ ಈಗಿನ ಗುರುಗಳು ಶಿವಕುಮಾರ ಸ್ವಾಮೀಜಿಗಳ ದಾಸೋಹ ಕಾಯಕವನ್ನು ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಆಶ್ರಯವನ್ನು ನೀಡುವ ಮೂಲಕ ದಾಸೋಹ ಪರಂಪರೆಯನ್ನು ಮುಂದುವರೆಸಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದಲೂ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಜನ್ಮದಿನದಂದು ದಾಸೋಹ ದಿನವೆಂದು ಆಚರಿಸಲಾಗುತ್ತದೆ. ಮಠಮಾನ್ಯಗಳಲ್ಲಿ ದಾಸೋಹಗಳನ್ನು ಮಾಡಲಾಗುತ್ತಿದೆ. ಈ ಕ್ಷೇತ್ರಕ್ಕೆ ದಾಸೋಹಕ್ಕೆ ವ್ಯವಸ್ಥೆಗಳನ್ನು ಮಾಡುವ ಮೂಲಕ ದಾಸೋಹ ದಿನವನವನ್ನು ಆಚರಿಸಲಾಗುವುದು. ವಿಶ್ವಮಟ್ಟದಲ್ಲಿಯೂ ದಾಸೋಹ ದಿನವನ್ನು ಆಚರಿಸುವ ಮೂಲಕ ವಿಶ್ವದಾಖಲೆಯನ್ನು ಮಾಡಲಾಗುವುದು. ಬಸವಣ್ಣನವರ ವಿಚಾರಧಾರೆಗಳನ್ನು ಪಾಲಿಸುವ ನಿಜವಾದ ಭಕ್ತರಾಗುತ್ತೇವೆ. ಭಕ್ತಿಯೆಂದರೆ ಕರಾರುರಹಿತ ಪ್ರೀತಿ. ಬಸವಣ್ಣನವರ ತತ್ವಾದರ್ಶಗಳ ಹಾದಿಯಲ್ಲಿ ನಡೆದು ಕನ್ನಡ ನಾಡನ್ನು ಸುಭಿಕ್ಷವಾಗಿಸೋಣ ಎಂದು ತಿಳಿಸಿದರು.

ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಸಚಿವರಾದ ವಿ.ಸೋಮಣ್ಣ, ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಎಸ್.ಟಿ. ಸೋಮಶೇಖರ್, ಸಂಸದ ಭಗವಂತ ಖೂಬಾ, ಭಾಜಪ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ತುಮಕೂರಿನ ಜನಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದರು.

*ಫೆ. 4 ರಂದು ಅನುದಾನ ರಹಿತ ಶಾಲೆಗಳ ಸಮ್ಮೇಳನ*

https://pragati.taskdun.com/unaided-schoolsconferencebangalorefeb-4th/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button