Latest

ಕೋವಿಡ್ ನಿಯಂತ್ರಣಕ್ಕೆ ಡಿಸಿಎಂ ಸವದಿಯವರ ಸಪ್ತ ಸೂತ್ರಗಳು

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಏಳು ಸೂತ್ರಗಳನ್ನು ರಾಯಚೂರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿರುವ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತಕ್ಷಣ ವಶಕ್ಕೆ ಪಡೆದು ಅಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಬೇಕು, ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ವೈದ್ಯರ ಜೊತೆ ಸಭೆ ನಡೆಸಿ ಕೋವಿಡ್ ಚಿಕಿತ್ಸಾ ವ್ಯವಸ್ಥೆಯನ್ನು ಅವಲೋಕಿಸಿ ಮಾರ್ಗದರ್ಶನ ನೀಡಬೇಕು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪ್ಯಾಕೇಜ್ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿ ಮಾಡುವ ದಂಧೆಯನ್ನು ಕೂಡಲೇ ನಿಯಂತ್ರಿಸಬೇಕು ಎಂದು ಉಪ ಮುಖ್ಯಮಂತ್ರಿಗಳು ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಸೂಚಿಸಿದರು.

ರಾಯಚೂರು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಅವರು ಪರಿಶೀಲಿಸಿದರು. ರಾಯಚೂರು ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಜಾರಿಗೊಳಿಸಬೇಕು ಎಂಬುದರ ಬಗ್ಗೆ ಈ ಸಭೆಯಲ್ಲಿ ಸವಿಸ್ತಾರವಾಗಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪ್ಯಾಕೇಜ್ ಹೆಸರಿನಲ್ಲಿ 3-4 ಲಕ್ಷ ರೂ.ಗಿಂತ ಹೆಚ್ಚು ಶುಲ್ಕವನ್ನು ಪಡೆಯುತ್ತಿರುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು ಅನಿರೀಕ್ಷಿತವಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಪರಿಶೀಲಿಸಬೇಕು ಮತ್ತು ಅಂಥ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಡವರಿಗೆ ಆರೋಗ್ಯ ಸೇವೆ ಸಿಗುವುದೇ ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಲ್ಲಾ ತಾಲ್ಲೂಕುಗಳಲ್ಲಿರುವ ತರಕಾರಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿಯಿಂದಾಗಿ ಕೋವಿಡ್ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ತರಕಾರಿ ಮಾರುಕಟ್ಟೆಯನ್ನು ಪಟ್ಟಣದ ಹೊರವಲಯದ ಯಾವುದಾದರೂ ಮೈದಾನಕ್ಕೆ ಅಥವಾ ವಿಶಾಲ ಬಯಲು ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ 3 ಹಂತಗಳಲ್ಲಿ ಕೋವಿಡ್ ಪ್ರಕರಣಗಳನ್ನು ಪರಿಗಣಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಮೊದಲನೆಯದಾಗಿ ಸಾಧಾರಣ ರೋಗ ಲಕ್ಷಣ ಇರುವಂಥವರನ್ನು ಹೋಂ ಕ್ವಾರೆಂಟೈನ್‍ಗೆ ಕಳುಹಿಸಿ ಅವರ ಮೇಲೆ ನಿಗಾ ವಹಿಸಬೇಕು. ಎರಡನೆಯದಾಗಿ ರೋಗ ಲಕ್ಷಣದ ಗಂಭೀರತೆಯ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡು ಅವರಿಗೆ ಚಿಕಿತ್ಸೆ ನೀಡಬೇಕು. ಮೂರನೆಯದಾಗಿ ರೋಗ ಲಕ್ಷಣವು ತೀವ್ರವಾಗುವ ಹಂತ ಕಂಡುಬಂದಾಗ ಅಂಥವರಿಗೆ ಆಕ್ಸಿಜನ್, ಐಸಿಯು ವ್ಯವಸ್ಥೆ, ವೆಂಟಿಲೇಟರ್ ಒದಗಿಸುವುದು ಮತ್ತು ರೆಮಿಡಿಸಿವರ್ ಔಷಧವನ್ನು ಅಗತ್ಯಕ್ಕನುಗುಣವಾಗಿ ನೀಡುವುದಕ್ಕೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಆಕ್ಸಿಜನ್ ಮತ್ತು ರೆಮಿಡಿಸಿವರ್‍ಗಳ ಕೃತಕ ಆಭಾವ ಉಂಟಾಗದಂತೆ ಆರೋಗ್ಯ ಇಲಾಖೆಯವರು ಎಚ್ಚರಿಕೆ ವಹಿಸಬೇಕು ಮತ್ತು ಆಕ್ಸಿಜನ್, ರೆಮಿಡಿಸಿವರ್‍ಗಳನ್ನು ಸಮರ್ಪಕವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು ಎಂದು ಅಭಿಪ್ರಾಯಪಟ್ಟರು.

ಕೋವಿಡ್‍ಗೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳುವುದಕ್ಕೆ ಅಥವಾ ಸಭೆ ನಡೆಸುವುದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದ್ದರಿಂದ ತಾಲ್ಲೂಕು ಮಟ್ಟಗಳಲ್ಲಿಯೂ ಸಹ ಆಯಾ ಅಧಿಕಾರಿಗಳ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಪ್ರತ್ಯೇಕ ಸಭೆಗಳನ್ನು ಏರ್ಪಡಿಸಿ ಸ್ಥಳೀಯವಾಗಿ ಅಗತ್ಯವಿರುವ ವ್ಯವಸ್ಥೆಯನ್ನು ಕೈಗೊಳ್ಳುವುದಕ್ಕೆ ಆದ್ಯತೆ ಮೇಲೆ ಮುಂದಾಗಬೇಕು ಎಂದು ತಿಳಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮೀಣ ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಆದಷ್ಟೂ ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಳ್ಳಬೇಕು. ಒಂದು ವೇಳೆ ಟ್ರಾಕ್ಟರ್ ಅಥವಾ ಬೇರೆ ವಾಹನಗಳಲ್ಲಿ ಕಾರ್ಮಿಕರನ್ನು ಗುಂಪುಗುಂಪಾಗಿ ಹೊರಗಿನಿಂದ ಕರೆಸಿಕೊಂಡರೆ ಅದರಿಂದ ಕೋವಿಡ್ ಹಬ್ಬುವ ಅಪಾಯ ಹೆಚ್ಚಾಗುತ್ತದೆ ಎಂದು ಅವರು ವಿವರಿಸಿದರು.

ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಎರಡು ದಿನಗಳಾದರೂ ಅವರನ್ನು ಪರೀಕ್ಷಿಸಲು ವೈದ್ಯರು ನಿರ್ಲಕ್ಷಿಸಿದ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿವೆ. ಆದ್ದರಿಂದ ಈ ರೀತಿ ಘಟನೆಗಳು ಯಾವುದೇ ಕಾರಣಕ್ಕೂ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸವದಿ ಆದೇಶಿಸಿದರು.

ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಅಗತ್ಯವಾದಲ್ಲಿ ಸಂಬಂಧಪಟ್ಟವರು ತಮ್ಮ ಗಮನಕ್ಕೆ ತರಬೇಕು. ಈ ಬಗ್ಗೆ ತಾವು ಕೂಡಾ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಚಿವರು, ಈ ಪಿಡುಗನ್ನು ತಡೆಯಲು ಒಂದು ಟೀಂವರ್ಕ್‍ನಂತೆ ನಾವೆಲ್ಲ ಪ್ರಯತ್ನಿಸೋಣ ಎಂದು ತಿಳಿಸಿದರು.

ಈ ವಿಡಿಯೋ ಕಾನ್ಫರೆನ್ಸ್‍ನಲ್ಲಿ ರಾಯಚೂರು ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳು ಕೋವಿಡ್ ತಡೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button