ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊವಿಡ್ ಉಪಕರಣ ಖರೀದಿಯಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರವೆಸಗಿದೆ. ಆದಾಗ್ಯೂ ವಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಕೇಳುತ್ತಿದ್ದಾರೆ. ಸರ್ಕಾರ ಮಾಡಿರುವ ಭ್ರಷ್ಟಾಚಾರಕ್ಕೆ ನಾವು ಸಹಕಾರ ನೀಡಬೇಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರ ಸರ್ಕಾರಕ್ಕೆ ಒಂದು ವರ್ಷ ಆಗಿದೆ. ಆಪರೇಷನ್ ನಡೆಸಿದ್ದೇವೆ ಅಂತ ಒಪ್ಪಿಕೊಳ್ಳಿ, ಮಾತು ಕೊಟ್ಟವರಿಗೆ ಮಂತ್ರಿಗಿರಿ ಕೊಟ್ಟೆವು ಎಂದು ಹೇಳಿ. ಆದರೆ, ಸಾಧನೆ ಮಾಡಿದ್ದೇವೆ ಎಂದು ಮಾತ್ರ ಹೇಳಬೇಡಿ. ಕೊರೊನ ಅಸೋಂಕಿನಿಂದ ರಾಜ್ಯದಲ್ಲಿ ಜನರು ಸೂಕ್ತ ಚಿಕಿತ್ಸೆ ಇಲ್ಲದೇ ಸಾಯುತ್ತಿದ್ದಾರೆ. ಇದು ಸೂತಕದಲ್ಲಿ ಸಂಭ್ರಮಾಚರಣೆ ಮಾಡುತ್ತಿರುವ ಸರ್ಕಾರ ಎಂದು ಗುಡುಗಿದರು.
ನಿವೃತ್ತ ನ್ಯಾಯಾಧೀಶರಿಂದ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಬೇಕು. ನಾನು ನಿಮ್ಮ ಬೆದರಿಕೆಗೆ ಬಗ್ಗುವವನಲ್ಲ. ನಮ್ಮದೂ ಸೇರಿಸಿ ತನಿಖೆ ಮಾಡಿಸಿ. ಎಸಿಬಿಗೆ ದೂರು ನೀಡೋದು ನಮಗೆ ಗೊತ್ತಿದೆ. ಎಸಿಬಿಗೆ ನೀಡುವುದು ಕೊನೆಯ ಹಂತ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ತನಿಖೆಗೆ ಒತ್ತಾಯ ಮಾಡಿದ್ದಾಗ ನಾವು ತನಿಖೆಗೆ ನೀಡಲಿಲ್ಲವೇ? ಸಚಿವರ ತಲೆದಂಡ ಮಾಡಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಘೋಷಣೆ ಮಾಡಿದ ಪರಿಹಾರ ಸಹ ಕೊಡಲಿಲ್ಲ. ರೈತರಿಗೆ ಸಾವಿರಾರು ಕೋಟಿ ನಷ್ಟವಾಗಿದೆ. ರೈತರಿಗೆ ಕೊಟ್ಟ ಪರಿಹಾರದ ಬಗ್ಗೆ ಪತ್ರ ಬಿಡುಗಡೆ ಮಾಡಿ. 1600 ಕೋಟಿ ಕೊರೊನಾ ಪ್ಯಾಕೇಜ್ ಕೇವಲ ಘೋಷಣೆ ಮಾಡಿದ್ದಾರೆ. ಯಾರು, ಯಾರಿಗೆ ಎಷ್ಟು ಕೊಟ್ಟಿದ್ದೀರಾ ಅನ್ನೋ ಮಾಹಿತಿ ಬಿಡುಗಡೆ ಮಾಡಲಿ. ಶ್ವೇತಪತ್ರ ಹೊರಡಿಸಿ ಅಂತ ಕೇಳಿದ್ರೆ ತಪ್ಪಾ? ಎಂದು ಗುಡುಗಿದರು.
ಪ್ರಧಾನಿ ಮೋದಿ 21 ದಿನಗಳಲ್ಲಿ ಕೋವಿಡ್ ಯುದ್ಧ ಮುಗಿಸುತ್ತೇನೆ ಎಂದಿದ್ದರು. ಜನರಿಂದ ದೀಪ ಹಚ್ಚಿ, ಚಪ್ಪಾಳೆ ತಟ್ಟಿಸಿದರು. ಆದರೀಗ ರಾಜ್ಯದ ಜನ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ. ಚಿಕಿತ್ಸೆ ದರ ಪಟ್ಟಿ ನಿಗದಿ ಮಾಡಿದ್ದರು. ಆದರೆ ದರ ಪಟ್ಟಿಯನ್ನು ಈಗ ರದ್ದು ಮಾಡಲಾಗಿದೆ. ಇಡೀ ರಾಜ್ಯ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದೆ. ಕತ್ತಲೆಯಲ್ಲಿ ರಾಜ್ಯ ಮುಳುಗಿ ಹೋಗಿದೆ. ಆದರೆ, ರಾಜ್ಯ ಸರ್ಕಾರ ಕೊರೊನಾ ಹೆಣಗಳಲ್ಲಿ ಹಣ ಮಾಡುತ್ತಿದೆ. ಈ ಸಾಧನೆಯನ್ನು ಎಲ್ಲ ಜಿಲ್ಲೆಗಳಿಗೆ ತಲುಪಿಸುತ್ತೇವೆ ಎಂದು ಟೀಕಿಸಿದ್ದಾರೆ.
ಒಂದು ಮಾಸ್ಕ್ ಗೆ 281 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಎನ್ 95 10 ಲಕ್ಷ ಮಾಸ್ಕ್ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಖರೀದಿ ಮಾಡಿದ್ದಾರೆ. ನಾನು ಆ ಇಲಾಖೆಯ ಮಂತ್ರಿಯಾಗಿದ್ದೆ. ನನಗೇನೂ ಮಾಹಿತಿ ಸಿಗಲ್ವಾ..? ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿದ್ದರು. ಆಗ ನಮ್ಮ ಸರ್ಕಾರಕ್ಕೆ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದಿದ್ದರು. ನಾವು ತಪ್ಪು ಮಾಡಿದ್ದರೆ ಜನರ ಮುಂದೆ ಹೇಳಿ. ಈಗ ಬಿಜೆಪಿ ಸರ್ಕಾರ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದೆ. ಇದಕ್ಕೆ ಏನಿದೆ ಉತ್ತರ? ಎಂದು ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ