ಜನ ಸಾಯುವಾಗ ರಸ್ತೆಗುಂಡಿ ಮುಚ್ಚದ ಸರ್ಕಾರ ಈಗ ಮೋದಿ ಭೇಟಿ ಹಿನ್ನೆಲೆಯಲ್ಲಿ ಮುಚ್ಚುತ್ತಿದೆ; ಡಿ.ಕೆ.ಶಿವಕುಮಾರ್ ಕಿಡಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮ್ಮ ಕಾರ್ಯಕ್ರಮಕ್ಕೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಕರೆ ತರಲು ಆದೇಶ ಹೊರಡಿಸಿದ್ದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳನ್ನು ಕೇಳಬೇಕು. ಈ ರೀತಿ ಮಾಡಿರುವುದು ನಾಚಿಕೆಗೇಡಿನ ವಿಚಾರವಲ್ಲವೇ? ಇದು ಬಿಜೆಪಿಯ ಜನಶಕ್ತಿ ಕುಸಿದಿರುವುದಕ್ಕೆ ಸಾಕ್ಷಿ. ಅವರಿಗೆ ಜನ ಬೇಕಿದ್ದರೆ ನಾವು ನಮ್ಮ ಪಕ್ಷದ ಕಾರ್ಯಕರ್ತರನ್ನು ಕಳುಹಿಸುತ್ತೇವೆ. ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನ ಸಾಯುವಾಗ ರಸ್ತೆಗುಂಡಿ ಮುಚ್ಚದ ಸರ್ಕಾರ ಈಗ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಮುಚ್ಚುತ್ತಿದ್ದಾರೆ. ‘ಜನ ಸಾಯುವಾಗ ಸರ್ಕಾರಕ್ಕೆ ಗುಂಡಿಗಳು ಕಾಣಲಿಲ್ಲ. ವಿರೋಧ ಪಕ್ಷಗಳು ಈ ಗುಂಡಿ ಮುಚ್ಚಲು ಹೋಮ, ಪೂಜೆ ಮಾಡಿದರು. ಸರಕಾರ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಈಗ ಮುಚ್ಚುತ್ತಿದ್ದಾರೆ. ಈಗಲಾದರೂ ಮುಚ್ಚುತ್ತಿದ್ದಾರೆ. ಪ್ರಧಾನಿ ಅವರು ಕಳೆದ ಬಾರಿ ಬಂದಾಗ ಡಾಂಬರು ಹಾಕಿದ ರಸ್ತೆಗಳು, ಅವರು ದೆಹಲಿಗೆ ಹೋಗುತ್ತಿದ್ದಂತೆ ಕಿತ್ತು ಬಂದವು. ಇವರ ಗುಣಮಟ್ಟದ ಕಾಮಗಾರಿಗೆ ಅದೇ ಸಾಕ್ಷಿ ಎಂದರು.
ಪ್ರಧಾನಿ ಮೋದಿ ಬರಲಿ. ಬಂದು ಬೆಂಗಳೂರು ಗುಂಡಿಗಳ ನಗರ ಎಂದು ಅವಾರ್ಡ್ ನೀಡಿ ಹೋಗಲಿ. ಬಿಜೆಪಿ ಸರ್ಕಾರದ ಕೆಲಸಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದರೂ ಕಿವಿಗೊಡದ ಸರ್ಕಾರ ಈಗ ಒಂದೇ ದಿನದಲ್ಲಿ ತರಾತುರಿಯಲ್ಲಿ ರಸ್ತೆಗುಂಡಿ ಮುಚ್ಚುತ್ತಿದೆ. ಪ್ರಧಾನಿ ಮೋದಿ ಮಾತ್ರ ಅಲ್ಲ ಯಾರನ್ನಾದರೂ ಕರೆದುಕೊಂಡು ಬರಲಿ ಬೆಂಗಳೂರಿನ ರಸ್ತೆ ಬಗ್ಗೆ ಅವಾರ್ಡ್ ಕೊಟ್ಟು ಹೋಗಲಿ ಎಂದು ಕಿಡಿಕಾರಿದರು.
ಕೆಂಪೇಗೌಡರ ಪ್ರತಿಮೆ ಅನಾವರಣ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಸರ್ಕಾರದ ಹಣದಲ್ಲಿ ಪ್ರತಿಮೆ ಮಾಡಿರುವುದು ದೊಡ್ಡ ಅಪರಾಧ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರಿಗೆ ನಾವು 2 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಪ್ರತಿ ಎಕರೆಗೆ 6 ಲಕ್ಷದಂತೆ ಹಣ ನೀಡಿದ್ದೇವೆ. ಅವರಿಗೆ ಹೇಳಿದ್ದರೆ ಅವರೇ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು. ಆದರೆ ಸರ್ಕಾರ ದುಡ್ಡು ಹಾಕಿದ್ದು ಯಾಕೆ? ಈ ವಿಚಾರವಾಗಿ ನಾನು ಶಂಕುಸ್ಥಾಪನೆ ದಿನವೇ ಹೇಳಿದ್ದೆ. ವಿಮಾನ ನಿಲ್ದಾಣದವರು ಇದರಿಂದ ಸಂಪಾದನೆ ಮಾಡುತ್ತಿಲ್ಲವೇ, ಧರ್ಮಕ್ಕೆ ಮಾಡುತ್ತಿದ್ದರೇ? ಇನ್ನು 2 ಸಾವಿರಕ್ಕೂ ಹೆಚ್ಚು ಎಕರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ನೀಡಿದ್ದೇವೆ. ಹೀಗಾಗಿ ವಿಮಾನ ನಿಲ್ದಾಣದವರೇ ಕಟ್ಟಬೇಕಿತ್ತು. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಯಾಕೆ ಮೌನವಾಗಿದ್ದಾರೆ? ಕರ್ನಾಟಕ ಸರ್ಕಾರ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರಾಗಿದ್ದು, ನಿಲ್ದಾಣದಿಂದಲೇ ಕಟ್ಟಬಹುದಿತ್ತು. ಈಗ ಇದನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದರು.
ಸಂಸತ್ತಿನಲ್ಲೂ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಿ ಎಂಬ ದೇವೇಗೌಡರ ಪತ್ರದ ಬಗ್ಗೆ ಕೇಳಿದಾಗ, ‘ಬಹಳ ಸಂತೋಷ, ಅಲ್ಲಿಯೂ ಪ್ರತಿಮೆ ನಿರ್ಮಾಣ ಮಾಡಲಿ, ವಿಧಾನಸೌಧ ಅವರಣದಲ್ಲೂ ಮಾಡಲಿ’ ಎಂದರು.
ಸಿದ್ದರಾಮಯ್ಯ ಅವರ ಬಗ್ಗೆ ಮುಕುಡಪ್ಪ ಅವರ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರ ಬಗ್ಗೆ ಬೇರೆಯವರು ಏನು ಹೇಳಿದ್ದಾರೆ ಗೊತ್ತಿಲ್ಲ. ಇದು ಖಾಸಗಿಯಾಗಿ ಮಾತನಾಡಿರುವ ವಿಚಾರ. ಈ ಬಗ್ಗೆ ತಿಳಿದು ಮಾತನಾಡುತ್ತೇನೆ. ನಮ್ಮ ನಾಯಕರ ಘನತೆ ಹಾಳು ಮಾಡಲು ಷಡ್ಯಂತ್ರ ನಡೆಯುತ್ತಿದೆ’ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ