*ಗಾಯಗೊಂಡಿದ್ದ ಚಿರತೆ ರಕ್ಷಣೆಗೆ ಮುಂದಾದ ವೇಳೆ ಸಿಬ್ಬಂದಿ ಮೇಲೆಯೇ ದಾಳಿ ನಡೆಸಿದ ಚಿರತೆ*

ಪ್ರಗತಿವಾಹಿನಿ ಸುದ್ದಿ: ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆ ರಕ್ಷಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದ್ದು, ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.
ದಾವಣಗೆರೆಯ ಅನಗೋಡು ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಚಿರತೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಇದರಿಂದ ಗಾಯಗೊಂಡ ಚಿರತೆ ರಸ್ತೆ ಪಕ್ಕದ ಚರಂಡಿಯಲ್ಲಿ ಬಿದ್ದುಕೊಂಡು ನರಳಾಡುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಚಿಕಿತ್ಸೆಗಾಗಿ ಚಿರತೆ ಸೆರೆಹಿಡಿಯುವಾಗ ಅದು ಸಿಬ್ಬಂದಿ ಮೇಲೆ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ಅರಣ್ಯ ಇಲಾಖೆಯ ಹೋಮ್ ಗಾರ್ಡ್ ಕೈಗೆ ಗಾಯವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಹೊಸಪೇಟೆಯಿಂದ ಬಂದ ವನ್ಯಜೀವಿ ಪಶುವೈದ್ಯರು ಗಾಯಗೊಂಡ ಚಿರತೆಗೆ ಅರವಳಿಕೆ ನೀಡಿದರು. ಪ್ರಜ್ಞೆ ತಪ್ಪಿದ ನಂತರ ಬಲೆ ಹಾಕಿ ಚಿರತೆಯನ್ನು ಸರೆಹಿಡಿಯಲಾಗಿದೆ. ಗಾಯಗೊಂಡ ಚಿರತೆಯನ್ನು ಶಿವಮೊಗ್ಗದ ತ್ಯಾವರೆಕೊಪ್ಪಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ.




