Kannada NewsKarnataka News

ಕ್ವಾರಂಟೈನ್ ಆಗಲು ಹಿಂದೇಟು: ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಯತ್ನ

 ಪ್ರಗತಿವಾಹಿನಿ ಸುದ್ದಿ, ಎಮ್.ಕೆ ಹುಬ್ಬಳ್ಳಿ :  ಮುಂಬೈನಿಂದ ಹೊಳಿಹೊಸುರ ಗ್ರಾಮದ ಚಂದ್ರಪ್ಪ ಗಾಣಗಿ ಎಂಬುವರ ಮನೆಗೆ  ಹರ್ಷಾ ತೇಲಿ  ಎಂಬುವವರು ತನ್ನ ತಾಯಿ ಭಾರತಿ ತೇಲಿ, ತಂದೆ ಅಣ್ಣಪ್ಪ ತೇಲಿ ಅವರನ್ನು ಕರೆದುಕೊಂಡು ಬಂದಿದ್ದಾರೆ.
ಮಾಹಿತಿ ತಿಳಿದು ಗ್ರಾಮ ಪಂಚಾಯತ ಸಿಬ್ಬಂದಿ ಹಾಗೂ ಆರೋಗ್ಯ ಅಧಿಕಾರಿಗಳು, ದಯವಿಟ್ಟು ನೀವು ಕ್ವಾರಂಟೈನ್ ಆಗಬೇಕು ಎಂದು ತಿಳಿ ಹೇಳಿದ್ದಾರೆ. ಅದಕ್ಕೆ ಬೆಲೆ ನೀಡದೇ ಮನೆಯಲ್ಲಿಯೇ ಉಳದಿದ್ದರಿಂದ ಪೋಲಿಸ್ ಅಧಿಕಾರಿ ಮಹಾಂತೇಶ ಮೇಟಿ ಅವರು ನೀವು ನೇರವಾಗಿ ಮನೆಗೆ ಬರುವಂತಿಲ್ಲ. 14 ದಿನಗಳವರೆಗೆ ಕ್ಯಾರಂಟೈನ್ ಆಗಬೇಕು. ನಂತರ ಮನೆಗೆ ಹೋಗಬೇಕೆಂದು ತಿಳಿಸಿದ್ದಾರೆ.

ಇದಕ್ಕೆ ಆ ಮನೆಯ ಸದಸ್ಯ ಶಶಿಧರ ಗಾಣಗಿ ಎಂಬಾತ ಇಲ್ಲಾ ಈಗಷ್ಟೆ ಮುಂಬಯಿಯಿಂದ ಬಂದಿದ್ದಾರೆ, ಸ್ವಲ್ಪ ತಡೆಯಿರಿ ಎಂದು ವಾದಿಸಿದ್ದಾರೆ.

ಮನೆಗೆ ಹೋಗುವಂತಿಲ್ಲಾ, ಮೊದಲು ಹೊರಗೆ ಬನ್ನಿ ಎಂದು ಒತ್ತಾಯ ಮಾಡಿದಾಗ ಪೋಲಿಸ್ ಅಧಿಕಾರಿಯ ಶರ್ಟ್ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ.
ತಹಸಿಲ್ದಾರ ದೊಡ್ಡಪ್ಪ ಹೂಗಾರ ಮಾತನಾಡಿ ಕೊರೊನಾ ವೈರಸ್ ಬಹಳಷ್ಟು ಅಪಾಯಕಾರಿ. ನೀವು ಮನೆಗೆ ಹೋಗುವಂತಿಲ್ಲ. ಸ್ಥಳೀಯ ಆರೋಗ್ಯ ಅಧಿಕಾರಿಗಳ ಹಾಗೂ ಗ್ರಾ.ಪಂ ಸಿಬ್ಬಂದಿಗಳ ಮಾತಿಗೆ ಬೆಲೆಕೊಡಬೇಕು ಎಂದು ತಿಳಿಸಿ ನೀವು ಬೈಲಹೊಂಗಲ ನಗರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಆಗಬೇಕು ಎಂದು ತಿಳಿಹೇಳಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬೈಲಹೊಂಗಲ ಪಿ.ಎಸ್.ಆಯ್ ಮಲ್ಲಪ್ಪ ಹೂಗಾರ ಮಾತನಾಡಿ, ಪೋಲಿಸ್ ಅಧಿಕಾರಿಗಳು ಇರುವುದು ನಿಮ್ಮ ರಕ್ಷಣೆಗಾಗಿ. ಅವರ ಜೊತೆ ಉತ್ತಮವಾಗಿ ವರ್ತಿಸಿ ಎಂದು ತಿಳಿಸಿದರು.

ಪೊಲೀಸರ ಜೊತೆ ವಾದಿಸಿರುವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸಮೀರ ಮುಲ್ಲಾ, ಗ್ರಾಮಸ್ಥರಾದ ಈರಣ್ಣಾ ಹಲಕಿ, ರಾಜೂಗೌಡ ಪಾಟೀಲ, ಬಸವಾಣೆಪ್ಪ ಬನ್ನೂರ, ಈರನಗೌಡ ಪಾಟೀಲ, ಗ್ರಾ ಪಂ ಅಭಿವೃದ್ಧಿ ಅಧಿಕಾರಿ  ಆಶಾ ಆರ್. ನೇಗಿನಹಾಳ, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಮಹಾಂತೇಶ ಹಿರೇಮಠ,  ಕಾರ್ಯದರ್ಶಿ ನಿಂಗಪ್ಪ ಮಾಳಗಿ ಮತ್ತಿತ್ತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button