ಪ್ರಗತಿವಾಹಿನಿ ಸುದ್ದಿ, ಅಥಣಿ: ಆತ್ಮಹತ್ಯೆ ಎಂದು ಶಂಕಿಸಲಾಗಿದ್ದ ಪ್ರಕರಣವೊಂದನ್ನು ಕೊಲೆ ಎಂದು ಬಲವಾದ ಆಧಾರಗಳಿಂದ ಸಂಶಯಿಸಿರುವ ಅಥಣಿ ಠಾಣೆ ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.
ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯ, ಅಥಣಿ ಹೊರವಲಯದ ಚವ್ಹಾಣ ತೋಟದಲ್ಲಿನ ನಾನಾಸಾಹೇಬ ಚವ್ಹಾಣ (58) ಮತ್ತು ಜಯಶ್ರೀ ಚವ್ಹಾಣ (51) ಎನ್ನುವ ದಂಪತಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಸುಮಾರು 6 -7 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ದಪತಿಯ ಮಗ ದಿಲೀಪ್ ದರೋಡೆ ಪ್ರಕರಣವೊಂದರಲ್ಲಿ ಜಮಖಂಡಿಯಲ್ಲಿ ಬಂಧಿಸಲ್ಪಡುತ್ತಾನೆ. ಆತನನ್ನು ಬಿಡಿಸಲು ದಂಪತಿ 7-8 ದಿನಗಳ ಹಿಂದೆ ಜಮಖಂಡಿಗೆ ತೆರಳಿ ವಕೀಲರನ್ನು ಭೇಟಿಯಾಗಿ ಬಂದಿರುತ್ತಾರೆ. ಆ ನಂತರ ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಆದರೆ ಬುಧವಾರ ಮನೆಯಿಂದ ವಾಸನೆ ಬರುತ್ತಿರುವುದಾಗಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೂ ಹೇಳುತ್ತಾರೆ.
ಆತ್ಮಹತ್ಯೆ ಇರಬಹುದು ಎನ್ನುವುದಕ್ಕೆ 2 ಕಾರಣ ನೀಡುತ್ತಾರೆ. ಮೊದಲನೆಯದಾಗಿ, ಮಗ ದಿಲೀಪನನ್ನು ಪೊಲೀಸರು ಬಂಧಿಸಿರುವುದು, ಎರಡನೆಯದು ದಿಲೀಪನಿಗೆ ಮದುವೆ ಗೊತ್ತು ಮಾಡಿದ ಹಿನ್ನೆಲೆಯಲ್ಲಿ ಹೆಣ್ಣಿನ ಕಡೆಯವರ ಮನೆ ನೋಡಲು ಬರುವವರಿದ್ದರು. ಅವರಿಗೆ ಮುಖ ತೋರಿಸಲಾಗದೆ ಆತ್ಮಹತ್ಯೆ ಮಾಡಕೊಂಡಿರಬಹುದು ಎನ್ನುವುದು.
ಆದರೆ, ಮನೆಯ ಒಳಗೆ ಪ್ರವೇಶಿಸಿದ ಪೊಲೀಸರಿಗೆ ಸಂಶಯ ಕಾಡಲಾರಂಭಿಸುತ್ತದೆ. ಮೃತ ದೇಹಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುತ್ತದೆ. ಅಲ್ಲಿನ ವಾತಾವರಣವನ್ನು ನೋಡಿ ಇದು ಕೊಲೆಯಾಗಿರಬಹುದು ಎಂದು ಶಂಕಿಸಿ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲಿಸುತ್ತಾರೆ. ಅವರು ಕೂಡ ಇದು ಕೊಲೆ ಎನ್ನುವುದಕ್ಕೆ ಸಾಕ್ಷಿಗಳನ್ನು ಪತ್ತೆ ಮಾಡುತ್ತಾರೆ. ನಂತರ ಪೊಸ್ಟ್ ಮಾರ್ಟಮ್ ನಡೆಸಿದಾಗ ಅದರ ವರದಿಯಲ್ಲಿ ಕೂಡ ಕೊಲೆಯ ಸಾಧ್ಯತೆ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಬುಧವಾರ ಮತ್ತು ಗುರುವಾರ ಅಥಣಿಗೆ ಭೇಟಿ ನೀಡಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಎಸ್ಪಿ ಭೀಮಾ ಶಂಕರ ಗುಳೇದ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ