ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಗಲ್ರಾಣಿ ಮತ್ತೆ ಕಿಡಿಕಾರಿದ್ದು, ಸಂಬರಗಿ ಒಬ್ಬ ಬೀದಿ ನಾಯಿ, ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಲು ಆತ ಯಾರು? ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪ್ರಶಾಂತ್ ಸಂಬರಗಿ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ದಾನೆ. ನಾನು ಚೀಯರ್ ಗರ್ಲ್ ಎಂದು ಹೇಳಿದ್ದಾನೆ. ನನಗಿನ್ನೂ ಮದುವೆಯಾಗಿಲ್ಲ. ನನ್ನ ಬಗ್ಗೆ ಅಪಪ್ರಚಾರ ಮಾಡಿ ನನಗೆ ಯಾಕೆ ತೊಂದರೆ ಕೊಡುತ್ತಿದ್ದಾನೆ. ಪದೇ ಪದೇ ನನ್ನ ವಿರುದ್ಧವೇ ಯಾಕೇ ಆರೋಪಗಳನ್ನು ಮಾಡುತ್ತೀರಾ? ನನಗೆ ತುಂಬಾ ಕಷ್ಟವಾಗುತ್ತಿದೆ. ನಾನು ಕಷ್ಟಪಟ್ಟು ಮೇಲೆ ಬಂದಿದ್ದೇನೆ. ನಾನು ನಟಿಯಾಗಿರುವುದೇ ತಪ್ಪಾ ಎಂದು ಕಣ್ಣೀರಿಟ್ಟಿದ್ದಾರೆ.
ದಯವಿಟ್ಟು ಪ್ರಶಾಂತ್ ಸಂಬರಗಿಯನ್ನು ಸುಮ್ಮನೆ ಬಿಡಬೇಡಿ. ನನ್ನ ಮೇಲಿನ ಸುಳ್ಳು ಆರೋಪಗಳಿಂದಾಗಿ ಅಪ್ಪ-ಅಮ್ಮ ತುಂಬಾ ಬೇಜಾರಾಗಿದ್ದಾರೆ. ನನ್ನ ಅಮ್ಮನಿಗೆ ಎದೆ ನೋವು ಕಾಣಿಸಿಕೊಂಡಿದೆ. ರಾತ್ರಿಯಿಂದ ಎದೆನೋವಿಂದ ಬಳಲುತ್ತಿದ್ದಾರೆ. ಅಮ್ಮನಿಗೆ ಏನಾದರೂ ಆದರೆ ನಾನು ಸಂಬರಗಿಯನ್ನು ಸತ್ತರೂ ಸುಮ್ಮನೆ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಶಾಂತ್ ಸಂಬರಗಿ ಪ್ರಚಾರಕ್ಕಾಗಿ ಹೀಗೆಲ್ಲ ಆರೋಪ ಮಾಡುತ್ತಿದ್ದಾನೆ. ರಾಹುಲ್ ನನ್ನ ಸ್ವಂತ ಅಣ್ಣನ ತರ, ಅವನು ಒಳ್ಳೆಯ ಹುಡುಗ. ರಾಹುಲ್ ಆಚೆ ಬಂದರೆ ಸಾಕು. ಶ್ರೀಲಂಕಾಗೆ ಕ್ಯಾಸಿನೋ ಕಾರ್ಯಕ್ರಮಕ್ಕೆ ನಾನು ಮುಖ್ಯ ಅತಿಥಿಯಾಗಿ ಹೋಗಿದ್ದೆ. ವಿವೇಕ್ ಒಬೇರಾಯ್ ನನ್ನ ಪಕ್ಕ ನಿಂತಿದ್ದರು, ಉಪೇಂದ್ರ ಸಹ ಭಾಗವಹಿಸಿದ್ದರು. ಎಲ್ಲಾ ರಾಜ್ಯಗಳಿಂದ 200 ಜನ ಪ್ರತಿನಿಧಿಸಿದ್ದರು. ಹೀಗಾಗಿ ಊಹಾಪೋಹಾಗಳನ್ನು ಮಾತನಾಡಬೇಡಿ. ನಾನು ಡ್ರಗ್ಸ್ ಮಾಫಿಯಾದಲ್ಲಿದ್ದೇನೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ನನ್ನ ವಿರುದ್ಧ ಸಾಕ್ಷ್ಯಗಳಿಲ್ಲ ಆದರೂ ಆರೋಪ ಯಾಕೆ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ