ಡಿ.ಕೆ.ಶಿವಕುಮಾರ ಇಂದಿನ ವಿಚಾರಣೆ ಅಂತ್ಯ, ಶನಿವಾರ ಮುಂದುವರಿಕೆ
ಪ್ರಗತಿವಾಹಿನಿ ಸುದ್ದಿ, ನವದೆಹಲಿ –
ಜಾರಿ ನಿರ್ದೇಶನಾಲಯ ನವದೆಹಲಿಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು, ನಾಳೆ ಬೆಳಗ್ಗೆ ಪುನಃ ಹಾಜರಾಗಲು ಸೂಚಿಸಿದೆ.
ಇಂದು ಸಂಜೆ 6.30ರ ಹೊತ್ತಿಗೆ ಆರಭವಾದ ವಿಚಾರಣೆ ರಾತ್ರಿ 11.45ರ ವರೆಗೂ ನಡೆಯಿತು. ನಂತರ ನಾಳೆ ಬೆಳಗ್ಗೆ 11 ಗಂಟೆಗೆ ಪುನಃ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ.
ವಿಚಾರಣೆ ಎದುರಿಸಿ ಹೊರಗೆ ಬಂದ ಡಿ.ಕೆ.ಶಿವಕುಮಾರ ಅವರನ್ನು ಮಾಧ್ಯಮದವರು, ವಿಚಾರಣೆ ಮುಗಿಯಿತಾ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಶಿವಕುಮಾರ ವಿಚಾರಣೆ ಆರಂಭವಾಗಿದೆ ಎಂದರು.
ಇಂದು 5 ಗಂಟೆಗಳಷ್ಟು ವಿಚಾರಣೆ ನಡೆಸಿದ್ದಾರೆ. ನಾನು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ. ಅದೇರೀತಿ ನಡೆದುಕೊಳ್ಳುತ್ತಿದ್ದೇನೆ. ನಾಳೆ 11 ಗಂಟೆಗೆ ಬರಲು ಸಮನ್ಸ್ ನೀಡಿದ್ದಾರೆ. ನಾಳೆ ಹಾಜರಾಗುತ್ತೇನೆ ಎಂದರು.
ಇಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಟ ಡಿ.ಕೆ.ಶಿವಕುಮಾರ, ಸಂಜೆ 6 ಗಂಟೆ ಹೊತ್ತಿಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾದರು. ರಾತ್ರಿ 11.45ರವರೆಗೂ ನಿರಂತರ ವಿಚಾರಣೆ ನಡೆಸಲಾಗಿದೆ.
ಶನಿವಾರ ವಿಚಾರಣೆ ಮುಂದುವರಿಯಲಿದ್ದು, ಅವರು ಸಹಕಾರ ಮುಂದುವರಿಸಿದರೆ, ಸಮರ್ಪಕ ಉತ್ತರ ನೀಡಿದಲ್ಲಿ ತಕ್ಷಣ ಬಂಧಿಸುವ ಸಾಧ್ಯತೆ ಇಲ್ಲ. ಉತ್ತರ ಇಡಿಗೆ ಸಮಾಧಾನ ತರದಿದ್ದಲ್ಲಿ ಬಂಧಿಸಲೂಬಹುದು. ನಾಳೆ ಅವರನ್ನು ಬಂಧಿಸಿದರೆ ಭಾನುವಾರ ಮತ್ತು ಸೋಮವಾರ ಇಡಿ ಕಸ್ಟಡಿಯಲ್ಲೇ ಇರಬೇಕಾಗಬಹುದು.
ಇಂದಿನ ವಿಚಾರಣೆ ಪೂರ್ಣಗೊಳ್ಳುವವರೆಗೂ ಸಾವಿರಾರು ಡಿ.ಕೆ.ಶಿವಕುಮಾರ ಅಭಿಮಾನಿಗಳು ಜಾರಿ ನಿರ್ದೇಶನಾಲಯದ ಕಚೇರಿ ಎದುರು ಕಾದಿದ್ದರು. ಸಂಸದರಾದ ಡಿ.ಕೆ.ಸುರೇಶ, ಶಿವರಾಮೇಗೌಡ ಮೊದಲಾದವರು ಸಹ ಇದ್ದರು.
ರಾತ್ರಿ ಶಿವಕುಮಾರ ವಿಚಾರಣೆ ಸಂಬಂಧ ವಕೀಲರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.
ಇಂದೇ ವಿಚಾರಣೆಗೆ ಹಾಜರಾಗಲಿರುವ ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ