Latest

ಗುಮಾಸ್ತ ಹುದ್ದೆಯಿಂದ ಮುಖ್ಯಮಂತ್ರಿವರೆಗೆ…. ಏರಿಳಿತದ ಜೀವನ

ಗುಮಾಸ್ತ ಹುದ್ದೆಯಿಂದ ಮುಖ್ಯಮಂತ್ರಿವರೆಗೆ… ಏರಿಳಿತದ ಜೀವನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

Related Articles
ಕರ್ನಾಟಕದ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರಿ ಗುಮಾಸ್ತರಾಗಿ ಕೆಲಸ ಮಾಡಿ, ನಂತರ ಹಾರ್ಡ್‌ವೇರ್ ಅಂಗಡಿಯೊಂದನ್ನು ನಡೆಸಿದವರು. ನಂತರ, ಆಕಸ್ಮಿಕವಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟು ಅಂದಿನಿಂದ ಇಂದಿನ ತನಕ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. 14 ತಿಂಗಳ ನಂತರ ನಾಲ್ಕನೇ ಬಾರಿಗೆ ರಾಜಕೀಯದಲ್ಲಿ ವಿಜೇತರಾಗಿದ್ದಾರೆ.
ಯಡಿಯೂರಪ್ಪನವರ ಮುಖದ ಮೇಲೆ, 14 ತಿಂಗಳ ನಂತರ ನಗು ಮರಳಿದೆ. ಕಳೆದ ಬಾರಿ ಅವರು ರಾಜ್ಯ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ.
76 ವರ್ಷದ ಲಿಂಗಾಯತ ನಾಯಕನಿಗೆ ಅಧಿಕಾರದ ಕಾರಿಡಾರ್ ತಲುಪುವುದು ಅಷ್ಟೇನೂ ಸುಲಭವಾಗಿರಲಿಲ್ಲ, ಮತ್ತು ಈ ಬಾರಿಯೂ ಅವರು ಮುಖ್ಯಮಂತ್ರಿಯಾಗುವ ಮೊದಲು ಕಾನೂನು ಹೋರಾಟಗಳನ್ನು ಮಾಡಬೇಕಾಯಿತು ಮತ್ತು ರಾಜಕೀಯ ನಾಟಕವು ವಾರಗಳವರೆಗೆ ಮುಂದುವರೆಯಿತು.

ಕೊನೆಯ ಅವಕಾಶವಾಗಿತ್ತು

ಅಧಿಕಾರ ತಪ್ಪಿದ ನಂತರ ಮುಖ್ಯಮಂತ್ರಿ ಹುದ್ದೆಯಿಂದ ದೂರವಾಗಿದ್ದ ಯಡಿಯೂರಪ್ಪ ಅವರು ತಮ್ಮ ಕುರ್ಚಿಯನ್ನು ಎಚ್‌ಡಿ ಕುಮಾರಸ್ವಾಮಿಯಿಂದ ಮರಳಿ ಪಡೆಯಲು ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಅಸ್ತ್ರ ಬಳಸಿ, ಬಿಜೆಪಿ ಸರ್ಕಾರವನ್ನು 2018 ರ ಮೇ 19 ರಂದು ಉರುಳಿಸಿತ್ತು. ವಿಶ್ವಾಸ ಮತ ಗೆಲ್ಲುವುದು ಕಷ್ಟವೆನ್ನುವುದು ಗೊತ್ತಾದ ಕಾರಣ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಈ ಬಾರಿ ಯಡಿಯೂರಪ್ಪ ಅವರ ಅಧಿಕಾರ ಹೋರಾಟದ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಇದು ಅವರ ಕೊನೆಯ ಅವಕಾಶವೆಂದು ಪರಿಗಣಿಸಲಾಗಿತ್ತು. ಈ ಬಗ್ಗೆ ಹೈಕಮಾಂಡ್ ಸಹ ವಾರ್ನಿಂಗ್ ನೀಡಿತ್ತು.
ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ತಮ್ಮ 15 ನೇ ವಯಸ್ಸಿನಲ್ಲಿಯೇ ಹಿಂದೂ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು. ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡು ನಾಯಕಗುಣಗಳನ್ನು ಕರಗತ ಮಾಡಿಕೊಂಡಿದ್ದರು.
ಯಡಿಯೂರಪ್ಪ 1983 ರಲ್ಲಿ ಮೊದಲ ಬಾರಿಗೆ ಶಿಕಾರಿಪುರದಿಂದ ವಿಧಾನಸಭೆಗೆ ಆಯ್ಕೆಯಾದರು ಮತ್ತು ಅಲ್ಲಿಂದ ಎಂಟು ಬಾರಿ ಶಾಸಕರಾಗಿ ಆಯ್ಕೆಯಾದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಜೊತೆಗೆ, ಅವರು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ, ವಿಧಾನ ಪರಿಷತ್ ಸದಸ್ಯ ಮತ್ತು ಸಂಸತ್ ಸದಸ್ಯರೂ ಆಗಿದ್ದಾರೆ.

ಹೋರಾಟದ ಬದುಕು 

ಸ್ನಾತಕೋತ್ತರ ಪದವಿ ಪಡೆದಿರುವ ಯಡಿಯೂರಪ್ಪ ಅವರು ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದರು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು ಮತ್ತು ತಮ್ಮ ಸ್ವಕ್ಷೇತ್ರ ಶಿಕಾರಿಪುರದ ಅಕ್ಕಿ ಗಿರಣಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದರು. ಇದರ ನಂತರ ಅವರು ಶಿವಮೊಗ್ಗದಲ್ಲಿ ತಮ್ಮ ಹಾರ್ಡ್‌ವೇರ್ ಅಂಗಡಿಯನ್ನು ತೆರೆದರು.
2007 ರ ನವೆಂಬರ್‌ನಲ್ಲಿ ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಈವರೆಗೆ ಮೂರು ಬಾರಿ ಮುಖ್ಯಮಂತ್ರಿಯಾದರೂ ಒಮ್ಮೆಯೂ ಅವಧಿ ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಮೊದಲ ಬಾರಿ ಜೆಡಿಎಸ್ ವಿಶ್ವಾಸಘಾತದಿಂದಾಗಿ ಅಧಿಕಾರ ಕಳೆದುಕೊಂಡರೆ, ಎರಡನೇ ಬಾರಿ ತಮ್ಮದೇ ಪಕ್ಷದ ಆಂತರಿಕ ಕಲಹಕ್ಕೆ ಖುರ್ಚಿ ಕಳೆದುಕೊಂಡರು. ಮೂರನೇ ಬಾರಿ ಬಹುಮತ ಸಾಬೀತುಪಡಿಸಲು ಕೆಲವೇ ಮತಗಳ ಕೊರತೆ ಇದ್ದ ಕಾರಣ ರಾಜಿನಾಮೆ ನೀಡಿ ಹೊರಬಂದರು.
ಛಲಬಿಡದ ತ್ರಿವಿಕ್ರಮನಂತೆ ನಿರಂತರ ಹೋರಾಟದ ಫಲವಾಗಿ ಈಗ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಿದ್ದಾರೆ.
ಈ ಬಾರಿಯೂ ಅವರ ಖುರ್ಚಿ ಹೂವಿನ ಹಾಸಿಗೆ ಖಂಡಿತ ಅಲ್ಲ. ಮುಂದಿನ ದಿನಗಳು ಕಲ್ಲು ಮುಳ್ಳಿನ ಹಾದಿಯೇ ಅನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಬಿಜೆಪಿ ಹೈಕಮಾಂಡ್ ಗಟ್ಟಿಯಾಗಿರುವುದರಿಂದ ಯಡಿಯೂರಪ್ಪ ಅಷ್ಟರಮಟ್ಟಿಗೆ ಪರಿಸ್ಥಿತಿ ನಿಭಾಯಿಸಬಹುದು. ಇಲ್ಲವಾದಲ್ಲಿ ವಲಸೆ ಬಂದವರಿಂದ, ಪಕ್ಷದೊಳಗಿನ ಅಸಮಾಧಾನಿತರಿಂದ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ.
ಚಹ ಮಾರಿ ಪ್ರಧಾನಿ ಹುದ್ದೆಗೆ ಏರಿದ ನರೇಂದ್ರ ಮೋದಿಯಂತೆ, ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ಹೊಟ್ಟೆಪಾಡಿಗಾಗಿ ಗುಮಾಸ್ತನಾಗಿ ಕೆಲಸ ಮಾಡು ಜೀವನದುದ್ದಕ್ಕೂ ಕಷ್ಟಪಟ್ಟು ಹೋರಾಟ ಮಾಡುತ್ತಲೇ ಬಂದವರು ಯಡಿಯೂರಪ್ಪ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button