Latest

ಹಬ್ಬ, ಉತ್ಸವಗಳ ಹಿಂದಿನ ಶಾಸ್ತ್ರ ಮತ್ತು ಮಣ್ಣಿನ ಗಣೇಶ ಮೂರ್ತಿಯನ್ನು ಪೂಜಿಸುವುದರ ಮಹತ್ವ !

ಹಬ್ಬ, ಉತ್ಸವ ಇತ್ಯಾದಿಗಳೆಡೆ ಕೇವಲ ರೂಢಿಯೆಂದು ನೋಡಬೇಡಿ, ಅದರ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರವನ್ನು ಅರಿತುಕೊಳ್ಳಿ !

ಭಾರತದಲ್ಲಿ ಅನೇಕ ಹಬ್ಬ, ಉತ್ಸವ ಮತ್ತು ಪರಂಪರೆಗಳಿವೆ. ಬಹುತೇಕ ಜನರು ಅದರೆಡೆಗೆ ಕೇವಲ ರೂಢಿಯೆಂದು ನೋಡುತ್ತಾರೆ ಮತ್ತು ಆ ದೃಷ್ಟಿಯಿಂದಲೇ ಆಚರಿಸುತ್ತಾರೆ; ಅದರ ಹಿಂದಿನ ಗೂಢಾರ್ಥ ಮತ್ತು ಶಾಸ್ತ್ರವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಪ್ರಾದೇಶಿಕ-ಭಿನ್ನತೆ, ಜನಜೀವನ, ಉಪಾಸನೆಯ ಪದ್ಧತಿ ಇತ್ಯಾದಿಗಳಿಂದ ಹಬ್ಬ, ಉತ್ಸವಗಳನ್ನು ಆಚರಿಸುವಾಗ ವಿವಿಧೆಡೆಗಳಲ್ಲಿ ಲೋಕರೂಢಿಯಂತೆ ಕೆಲವೊಮ್ಮೆ ವ್ಯತ್ಯಾಸಗಳು ಕಂಡುಬರುತ್ತವೆ. ಶಾಸ್ತ್ರದ ಆಧಾರವಿಲ್ಲದಿರುವಾಗಲೂ ಕೇವಲ ಹಿಂದಿನ ನಡೆದುಬಂದ ಲೌಕಿಕ ರೂಢಿ ಎಂದು ಯಾವುದಾದರೊಂದು ರೂಢಿಯನ್ನು ಆಚರಿಸುವುದು ಅಯೋಗ್ಯವಾಗಿದೆ. ಇಂತಹ ಲೌಕಿಕ ರೂಢಿಗಳಿಗೆ ತಿಲಾಂಜಲಿಯನ್ನಿಟ್ಟು ಶಾಸ್ತ್ರಸಮ್ಮತ ಕೃತಿಗಳನ್ನು ಮಾಡುವುದೇ ಆವಶ್ಯಕವಾಗಿದೆ. ವ್ರತಗಳ ವಿಷಯದಲ್ಲಾದರೆ ಅದರ ಹಿಂದೆ ಯಾರಾದರೊಬ್ಬ ಉನ್ನತರ ಸಂಕಲ್ಪವಿರುವುದೇ ಅದರ ಹಿಂದಿನ ಶಾಸ್ತ್ರೀಯ ಕಾರಣವಾಗಿದೆ.

ಧರ್ಮ ಮತ್ತು ಸಂಸ್ಕೃತಿ ಇವುಗಳ ಹಾನಿ ಮಾಡುವ ರೂಢಿಗಳನ್ನು ವಿರೋಧಿಸಿ !

ಇತ್ತೀಚೆಗೆ ಇಂತಹ ರೂಢಿಗಳು ಜನರ ಮನಸ್ಸಿನಲ್ಲಿ ಮಹತ್ವದ ಸ್ಥಾನ ಪಡೆದಿವೆ, ಉದಾ. ದೀಪಾವಳಿ ಮತ್ತು ಗಣೇಶೋತ್ಸವಗಳಲ್ಲಿ ಪಟಾಕಿ ಸಿಡಿಸುವುದು, ಗಣೇಶೋತ್ಸವ ಮತ್ತು ನವರಾತ್ರ್ಯೋತ್ಸವಗಳ ನಿಮಿತ್ತ ಅನೇಕ ಅಯೋಗ್ಯ ಪದ್ಧತಿಗಳಾಗುತ್ತವೆ. ‘ಈ ರೂಢಿಗಳೆಂದರೇ ಹಬ್ಬ ಮತ್ತು ಉತ್ಸವಗಳನ್ನು ಆಚರಿಸುವ ಪದ್ಧತಿ, ಎಂಬ ತಪ್ಪು ಸಂಸ್ಕಾರವು ಭಾವೀ ಪೀಳಿಗೆಯ ಮೇಲಾಗುತ್ತಿದೆ. ಈ ರೂಢಿಗಳನ್ನು ಬಹಿಷ್ಕರಿಸುವುದು ಮತ್ತು ಅವುಗಳನ್ನು ವಿರೋಧಿಸುವುದು ಧರ್ಮಪಾಲನೆಯೇ ಆಗಿದೆ.

ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳ ಮಹತ್ವ !

ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳಿಗೆ ಅಧ್ಯಾತ್ಮಶಾಸ್ತ್ರೀಯ ಆಧಾರವಿರುವುದರಿಂದ ಅವುಗಳನ್ನು ಆಚರಿಸುವಾಗ ಚೈತನ್ಯನಿರ್ಮಿತಿಯಾಗುತ್ತದೆ ಮತ್ತು ಅದರಿಂದ ಸರ್ವಸಾಮಾನ್ಯ ಮನುಷ್ಯನಿಗೂ ಈಶ್ವರನ ಕಡೆ ಹೋಗಲು ಸಹಾಯವಾಗುತ್ತದೆ.

ಸಾಧಕರ ದೃಷ್ಟಿಯಿಂದ ಕರ್ಮಕಾಂಡವು ಕನಿಷ್ಟ ಮಟ್ಟದ್ದಾದರೂ, ಸಾಧನೆ ಮಾಡದಿರುವವರನ್ನು ಕ್ರಮೇಣ ಸಾಧನೆಯ ಕಡೆ ಹೊರಳಿಸುವ ದೃಷ್ಟಿಯಿಂದ ಅದು ಮಹತ್ವದ್ದಾಗಿದೆ. ಕರ್ಮಕಾಂಡದ ದೃಷ್ಟಿಯಿಂದ ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು ಎಷ್ಟು ಮಹತ್ವದ್ದಾಗಿವೆ ಎಂದರೆ ವರ್ಷದಲ್ಲಿ ಸುಮಾರು ಶೇ.75ರಷ್ಟು ತಿಥಿಗಳಂದು ಏನಾದರೊಂದು ಇದ್ದೇ ಇರುತ್ತದೆ.
ವಾಸ್ತವದಲ್ಲಿ ನಮ್ಮ ಜೀವನದಲ್ಲಿ ಯಾವಾಗಲೂ ಸಂಯಮ ಇರಬೇಕು, ಆದರೆ ಅದನ್ನು ನಾವು ಪಾಲಿಸುವುದಿಲ್ಲ; ಆದುದರಿಂದ ಹಬ್ಬ-ಹರಿದಿನಗಳು, ಧಾರ್ಮಿಕ ಉತ್ಸವಗಳು ಮತ್ತು ವ್ರತಗಳ ದಿನಗಳಲ್ಲಾದರೂ ಅದರ ಪಾಲನೆಯಾಗಬೇಕು; ಅಂದರೆ ಕ್ರಮೇಣ ಸದಾಕಾಲ ಸಂಯಮದಿಂದ ಜೀವನವನ್ನು ನಡೆಸಬಹುದು.

ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ !

ಜೇಡಿಮಣ್ಣು ಅಥವಾ ಆವೆಮಣ್ಣಿನಿಂದ ಮೂರ್ತಿಯನ್ನು ತಯಾರಿಸಬೇಕು ಎಂಬ ಶಾಸ್ತ್ರವಿಧಿಯಿದೆ :
ಪಾರ್ವತಿಯು ತಯಾರಿಸಿದ ಶ್ರೀ ಗಣೇಶನು ಮಹಾಗಣಪತಿಯ ಅವತಾರವಾಗಿದ್ದಾನೆ. ಅವಳು ಮೃತ್ತಿಕೆಯ (ಮಣ್ಣಿನ) ಆಕಾರ ಮಾಡಿ ಅದರಲ್ಲಿ ಶ್ರೀ ಗಣೇಶನ ಆವಾಹನೆಯನ್ನು ಮಾಡಿದಳು. (ಪುರಾಣದಲ್ಲಿ ಶ್ರೀ ಗಣೇಶನು ಮಣ್ಣಿನಿಂದ ನಿರ್ಮಾಣವಾಗಿದ್ದಾನೆ ಎಂದು ಹೇಳಲಾಗಿದೆ.) ‘ಭಾದ್ರಪದ ಶುಕ್ಲ ಚತುರ್ಥಿಯಂದು ಮಣ್ಣಿನ ಗಣೇಶಮೂರ್ತಿಯನ್ನು ತಯಾರಿಸಬೇಕು’, ಎಂದು ಶಾಸ್ತ್ರವಿಧಿಯಿದೆ.

ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಅಥವಾ ಆವೆಮಣ್ಣಿನಿಂದ ತಯಾರಿಸಬೇಕು. ಇತ್ತೀಚೆಗೆ ಮಾತ್ರ ಭಾರ ಕಡಿಮೆಯಾಗಬೇಕು ಮತ್ತು ಅದು ಹೆಚ್ಚು ಆಕರ್ಷಕವಾಗಿ ಕಾಣಿಸಬೇಕೆಂದು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಮಣ್ಣಿನ ಮತ್ತು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಗಣೇಶ ಮೂರ್ತಿಯಲ್ಲಿ ವ್ಯತ್ಯಾಸವಿದೆ.

ಮಣ್ಣಿನ ಮೂರ್ತಿಯಿಂದಾಗುವ ಲಾಭಗಳು

. ಮಣ್ಣಿನ ಮೂರ್ತಿಯಲ್ಲಿ ಶ್ರೀ ಗಣೇಶನ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿ ಕಾರ್ಯನಿರತವಾಗಿರುತ್ತವೆ: ‘ಮಣ್ಣಿನಲ್ಲಿರುವ ಪೃಥ್ವಿತತ್ತ್ವದಿಂದಾಗಿ ಮೂರ್ತಿಯು ಬ್ರಹ್ಮಾಂಡ ಮಂಡಲದಿಂದ ಆಕರ್ಷಿಸಿದ ದೇವತೆಯ ತತ್ತ್ವವು ಮೂರ್ತಿಯಲ್ಲಿ ದೀರ್ಘಕಾಲ ಕಾರ್ಯನಿರತವಾಗಿರುತ್ತದೆ. ತದ್ವಿರುದ್ಧವಾಗಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಲ್ಲಿ ದೇವತೆಯ ತತ್ತ್ವವನ್ನು ಆಕರ್ಷಿಸುವ ಮತ್ತು ಕಾರ್ಯನಿರತವಾಗಿಡುವ ಕ್ಷಮತೆಯು ಕಡಿಮೆಯಿರುತ್ತದೆ. ಆದ್ದರಿಂದ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚೇನೂ ಲಾಭವಾಗುವುದಿಲ್ಲ.’

. ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ವಾಯುಮಂಡಲವು ಶುದ್ಧವಾಗುತ್ತದೆ: ‘ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಅದು ಕೂಡಲೇ ನೀರಿನಲ್ಲಿ ಕರಗಿ, ಹರಿಯುವ ನೀರಿನಿಂದ ಸುತ್ತ ಮುತ್ತಲಿನ ಪರಿಸರದಲ್ಲಿ ದೂರದವರೆಗೆ ದೇವತೆಗಳ ಸಾತ್ತ್ವಿಕ ಲಹರಿಗಳನ್ನು ಕಡಿಮೆ ಕಾಲಾವಧಿಯಲ್ಲಿ ಪ್ರಕ್ಷೇಪಿಸುತ್ತದೆ. ಇದರಿಂದ ಸಂಪೂರ್ಣ ಪರಿಸರದ ವಾಯುಮಂಡಲ ಶುದ್ಧವಾಗುತ್ತದೆ. ಈ ಪ್ರಕ್ರಿಯೆಯಿಂದ ಸಮಷ್ಟಿ ಸ್ತರದಲ್ಲಿ ಲಾಭವಾಗಲು ಸಹಾಯವಾಗುತ್ತದೆ.’

‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದಾಗುವ ಹಾನಿ
ಮೂರ್ತಿಯ ವಿಸರ್ಜನೆಯು ಸರಿಯಾಗಿ ಆಗುವುದಿಲ್ಲ :
‘ಪ್ಲಾಸ್ಟರ್ ಆಫ್ ಪ್ಯಾರಿಸ್’ ನೀರಿನಲ್ಲಿ ಸಹಜವಾಗಿ ಕರಗದಿರುವುದರಿಂದ ವಿಸರ್ಜನೆಯ ನಂತರ ಮೂರ್ತಿಯು ನೀರಿನ ಮೇಲೆ ತೇಲುತ್ತದೆ. ಅನೇಕ ಕಡೆಗಳಲ್ಲಿ ವಿಸರ್ಜಿತವಾಗದ ಮೂರ್ತಿಗಳ ಅವಶೇಷಗಳನ್ನು ಕೆಲವೊಮ್ಮೆ ಒಟ್ಟು ಮಾಡಿ ಅವುಗಳ ಮೇಲೆ ‘ಬುಲ್ಡೋಝರ್’ನ್ನು ಚಲಾಯಿಸಲಾಗುತ್ತದೆ. ಹೀಗೆ ಮಾಡುವುದು ಶ್ರೀ ಗಣಪತಿಯ ಘೋರ ವಿಡಂಬನೆಯೇ ಆಗಿದೆ. ಯಾವ ಸನ್ಮಾನದಿಂದ ನಾವು ಶ್ರೀ ಗಣಪತಿಯನ್ನು ಆವಾಹನೆ ಮಾಡುತ್ತೇವೆಯೋ, ಅದೇ ಸನ್ಮಾನದಿಂದ ಅವನನ್ನು ಬೀಳ್ಕೊಡುವುದೂ ಆವಶ್ಯಕವಾಗಿದೆ. ಶ್ರೀ ಗಣಪತಿಯ ಘೋರ ವಿಡಂಬನೆಯಾಗುವುದರಿಂದ ಘೋರ ಪಾಪ ತಗಲುತ್ತದೆ.

ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಬೇರೆ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರದ ವಿರುದ್ಧವಾಗಿದೆ !

ಇತ್ತೀಚೆಗೆ ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್’ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶಮೂರ್ತಿಯನ್ನು ತಯಾರಿಸುತ್ತಾರೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಇಂತಹ ಮೂರ್ತಿಯ ಕಡೆಗೆ ಶ್ರೀ ಗಣೇಶನ ಪವಿತ್ರಕಗಳು ಆಕರ್ಷಿಸುವುದಿಲ್ಲ.

‘ಇಕೋ ಫ್ರೆಂಡ್ಲಿ’ ಗಣೇಶಮೂರ್ತಿಗಳ ಬಗೆಗಿನ ವಂಚನೆಯಿಂದ ಎಚ್ಚರ ! :

ಇತ್ತೀಚೆಗೆ ಕೆಲವು ಸಂಸ್ಥೆಗಳು ‘ಇಕೋ-ಫ್ರೆಂಡ್ಲಿ (‘ಇಕಾಲಾಜಿಕಲ್ ಫ್ರೆಂಡ್ಲಿ’, ಅಂದರೆ ಪರಿಸರ ಸ್ನೇಹಿ) ಶ್ರೀ ಗಣೇಶಮೂರ್ತಿ’ಗಳನ್ನು ತಯಾರಿಸಲು ಆಹ್ವಾನಿಸುತ್ತಾರೆ. ಅವುಗಳಲ್ಲಿ ಕೆಲವು ಮೂರ್ತಿಗಳನ್ನು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತದೆ. ಇದು ಅಶಾಸ್ತ್ರೀಯವಂತೂ ಆಗಿದೆ, ಹಾಗೆಯೇ ಪರಿಸರಕ್ಕೆ ಹಾನಿಕರಕವೂ ಆಗಿದೆ; ಏಕೆಂದರೆ ಕಾಗದದ ಮುದ್ದೆಗಳು ನೀರಿನಲ್ಲಿರುವ ಪ್ರಾಣವಾಯುವನ್ನು ಹೀರುತ್ತವೆ ಮತ್ತು ಜೀವಗಳಿಗೆ ಹಾನಿಕರವಾದ ‘ಮಿಥೇನ್’ ವಾಯುವನ್ನು ನಿರ್ಮಿಸುತ್ತವೆ. ಇಂತಹ ಸಂಸ್ಥೆಗಳಿಂದ ಮಾಡಲಾಗಿರುವ ನಿಸರ್ಗದ ವಿಚಾರವು ಕೇವಲ ಮೇಲುಮೇಲಿನದ್ದಾಗಿರುತ್ತದೆ. ಹಿಂದೂ ಧರ್ಮಶಾಸ್ತ್ರವು ನಿಸರ್ಗದ ರಕ್ಷಣೆಯೊಂದಿಗೆ ಮಾನವನ ಸರ್ವಾಂಗೀಣ ಉನ್ನತಿಯ ವಿಚಾರವನ್ನೂ ಮಾಡಿರುತ್ತದೆ ಎಂಬುದನ್ನು ಗಮನದಲ್ಲಿಡಿ.

ಧರ್ಮಶಾಸ್ತ್ರಕ್ಕನುಸಾರ ತರಬೇಕಾದ ಜೇಡಿಮಣ್ಣಿನ ಮೂರ್ತಿಯು ದುಬಾರಿಯಾಗಿರುತ್ತದೆ : ಈ ರೀತಿ ಹೇಳುವುದು ಕುಂಟುನೆಪವಾಗಿದೆ. ಪ್ರತಿಯೊಂದು ಕುಟುಂಬದಲ್ಲಿ ಗಣೇಶೋತ್ಸವಕ್ಕಾಗಿ ಆಗುವ ಒಟ್ಟು ಖರ್ಚಿನಲ್ಲಿ (ಉದಾ. ಆಧುನಿಕ ಅಲಂಕಾರ, ಕುಟುಂಬದವರಿಗೆ ಬಟ್ಟೆಗಳ ಖರೀದಿ ಇತ್ಯಾದಿ) ಮೂರ್ತಿಯ ಖರೀದಿಗಾಗಿ ಆಗುವ ಖರ್ಚು ಅತ್ಯಲ್ಪವಾಗಿರುತ್ತದೆ. ಶ್ರೀ ಗಣೇಶನನ್ನು ಪೂಜಿಸುವುದರ ಉದ್ದೇಶವು ಕುಟುಂಬದಲ್ಲಿನ ಸದಸ್ಯರಿಗೆ ಮೂರ್ತಿಯಿಂದ ಗಣೇಶತತ್ತ್ವ ಸಿಗುವುದಾಗಿದೆ. ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಿಂದ ಈ ಲಾಭ ಸಿಗುವುದು ಸಾಧ್ಯವಿಲ್ಲ. ಗಣೇಶಭಕ್ತರೇ, ಮೂರ್ತಿಯ ಖರ್ಚಿನ ಪ್ರಶ್ನೆಯಿದ್ದರೆ, ಚಿಕ್ಕ ಮೂರ್ತಿಯನ್ನು ತೆಗೆದುಕೊಳ್ಳಿರಿ; ಆದರೆ ತುಲನೆಯಲ್ಲಿ ಅಗ್ಗವಾಗಿದೆ ಎಂದು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯನ್ನು ಕೊಳ್ಳುವ ಧರ್ಮಶಾಸ್ತ್ರವಿರೋಧಿ ವರ್ತನೆಯನ್ನು ಮಾಡಬೇಡಿರಿ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಕಿರುಗ್ರಂಥ ‘ಶ್ರೀ ಗಣೇಶಮೂರ್ತಿ ಶಾಸ್ತ್ರಾನುಸಾರ ಇರಬೇಕು’)

ಸಂಗ್ರಹ : ಮೋಹನ್ ಗೌಡ
ಸಂಪರ್ಕ :7204082609

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button