
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೋನಾ ಸಂಕಷ್ಟ ಸಮಯದಲ್ಲಿ ಬದುಕಿಗಾಗಿ ಜನತೆ ಹೋರಾಟ ಮಾಡುತ್ತಿದ್ದರೆ, ವರ್ಷಾಚರಣೆಯ ಸಂಭ್ರಮದಲ್ಲೂ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತನ್ಮಯವಾಗಿರುವ ಬಿಜೆಪಿ ಸರ್ಕಾರ 24 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಉಡುಗೊರೆ ನೀಡುವ ಮೂಲಕ ಜನತೆಯ ಆಶೋತ್ತರಗಳಿಗೆ ಕೊಳ್ಳಿ ಇಟ್ಟಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಗುಡುಗಿರುವ ಕುಮಾರಸ್ವಾಮಿ, ಸರ್ಕಾರ ಮಾತ್ರವಲ್ಲ, ಜನತೆಯು ಕೂಡ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವಾಗ ಬೊಕ್ಕಸ ಹಾಗೂ ಜನಸಾಮಾನ್ಯನ ಮೇಲೆ ಹೊರೆ ಹೇರುವ ಮೂಲಕ ‘ಶಾಸಕರಿಗೆ ಉಡುಗೊರೆ, ಜನತೆಗೆ ಬರೆ’ ಎಳೆಯುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಲಜ್ಜ ನಡವಳಿಕೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಸಾಮಾನ್ಯರ ಹಿತ ಮುಖ್ಯವೋ? ಕುರ್ಚಿ ಉಳಿಸಿಕೊಳ್ಳಲು ಶಾಸಕರ ಹಿತ ಮುಖ್ಯವೋ? ರಾಜ್ಯದ ಜನತೆಗೆ ಉಡುಗೊರೆ ಕೊಡಬೇಕಾಗಿದ್ದ ಸರ್ಕಾರ ಶಾಸಕರ ತೃಪ್ತಿಪಡಿಸುವ ಅನಾಚಾರ ಪ್ರದರ್ಶಿಸಿದೆ. ರಾಜ್ಯ ಎದುರಿಸುತ್ತಿರುವ ಇಂತಹ ಸಂಕಷ್ಟದ ಸಮಯದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಗಾದಿಯ ಮೇಲೆ ಸವಾರಿ ಮಾಡುವುದು ವಿಹಿತವೇ ಎಂಬುದನ್ನು ಶಾಸಕರು ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಕೊರೋನಾ ಸಂಕಷ್ಟ ಸಮಯದಲ್ಲಿ ಬದುಕಿಗಾಗಿ ಜನತೆ ಹೋರಾಟ ಮಾಡುತ್ತಿದ್ದರೆ, ವರ್ಷಾಚರಣೆಯ ಸಂಭ್ರಮದಲ್ಲೂ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತನ್ಮಯವಾಗಿರುವ ಬಿಜೆಪಿ ಸರ್ಕಾರ 24 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಉಡುಗೊರೆ ನೀಡುವ ಮೂಲಕ ಜನತೆಯ ಆಶೋತ್ತರಗಳಿಗೆ ಕೊಳ್ಳಿ ಇಟ್ಟಿದೆ.
ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ ಎಂಬ ಬೀಜ ಮಂತ್ರ ಪಠಿಸುತ್ತಿರುವ ಬಿಜೆಪಿ ಸರ್ಕಾರದ ಬಡವರ ವಿರೋಧಿ ನೀತಿಗೆ ಇದಕ್ಕಿಂತ ಉದಾಹರಣೆ ಬೇಕೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎಂದು ಪ್ರೆಶ್ನಿಸಿದ್ದಾರೆ.