Kannada NewsKarnataka News

ಹಾರೂಗೇರಿ: ಹೆಂಡತಿ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ನೇಣಿಗೆ ಶರಣು

ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಹಂದಿಗುಂದ : ರಾಯಬಾಗ ತಾಲೂಕು ಹಂದಿಗುಂದ ಗ್ರಾಮದಲ್ಲಿ ಕಳೆದ ಮಂಗಳವಾರ ರಾತ್ರಿ ಕುಡಿದ ನಶೆಯಲ್ಲಿ ಹೆಂಡತಿಯ ತಲೆಗೆ ದೊಣ್ಣೆಯಿಂದ ಹೊಡೆದ ಪರಿಣಾಮವಾಗಿ ಪತ್ನಿ ಬಾಳವ್ವ ಮುತ್ತಪ್ಪ ಬಿರಾಜ (೩೦) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು .
ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪತಿ ಮುತ್ತಪ್ಪ ಲಕ್ಕಪ್ಪ ಬಿರಾಜ(೩೫) ಈತನು ಹಂದಿಗುಂದ ಗ್ರಾಮದ ಸರಹದ್ದಿನ ಹೊರವಲಯದ ಮುತ್ತಪ್ಪ ಭರಮಪ್ಪ ಪೂಜೇರಿ ಎಂಬುವವರ ಜಮೀನಿನ ಮಾವಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಗುರುವಾರ ರಾತ್ರಿ  ಶರಣಾಗಿದ್ದಾನೆ.
 ಸಾರಾಯಿ ವ್ಯಸನಕ್ಕೆ ಕುಟುಂಬವೊಂದು ಹಾಳಾಗಿದ್ದು ಇಂತಹ ದುರ್ಘಟನೆಗೆ  ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ. ಈ ತಂದೆ ತಾಯಿಗಳಿಗೆ ಮೂವರು ಗಂಡು ಮಕ್ಕಳಿದ್ದು  ಮಕ್ಕಳಿದ್ದು ಅವು ಅನಾಥವಾಗಿವೆ.
ಘಟನಾ ಸ್ಥಳಕ್ಕೆ ಹಾರೂಗೇರಿ ಪೋಲಿಸ್ ಠಾಣೆಯ  ಸಿಬ್ಬಂದಿ  ಭೇಟಿ ನೀಡಿದ್ದರು. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
**ಸಾರಾಯಿ ಅಂಗಡಿ ತಂದ ಅವಾಂತರ** :           
ಹಂದಿಗುಂದ ಗ್ರಾಮದಲ್ಲಿ  ಮೊದಲು ಸಾರಾಯಿ ಅಂಗಡಿ ತೆರೆಯಲು ಬುದ್ದಿಜೀವಿಗಳು ವಿರೋಧ ವ್ಯಕ್ತಪಡಿಸಿದ್ದರು. ಅದರ ಪರಿಣಾಮವಾಗಿ ಊರಲ್ಲಿ ಶಾಂತಿ, ಸಮಾಧಾನದ ವಾತಾವರಣವಿತ್ತು. ಇತ್ತೀಚೆಗೆ ಊರಲ್ಲಿ ಸಾರಾಯಿ ಅಂಗಡಿ ತೆರೆಯಲ್ಪಟ್ಟರೂ ಯಾವ ಬುದ್ದಿಜೀವಿಗಳೂ ವಿರೋಧಿಸಲಿಲ್ಲ ಎಂಬುದೇ ದುರಂತದ ಸಂಗತಿ.
ಶಾಂತವಾಗಿದ್ದ ಊರಲ್ಲಿ ಲಾಭ-ಲೋಭಗಳ ಮೇಲಾಟವಾಗಿ ಸಾರಾಯಿ ಅಂಗಡಿ ಓಪನ್ ಆದಾಗಿನಿಂದ ಎಷ್ಟೋ ಕುಟುಂಬಗಳು ನೆಮ್ಮದಿ ಕಳೆದುಕೊಂಡಿವೆ. ಕುಡುಕರು ಮನೆಯಲ್ಲಿನ‌ ಹಣ, ಒಡವೆ ಕದ್ದು ಸಾರಾಯಿ ಕುಡಿದು ಮನೆಗೆ ಹೋಗಿ ಮಡದಿ ಮಕ್ಕಳನ್ನು ಬಡಿಯುವ ಮೂಲಕ ಮನೆಯ ಶಾಂತಿಯನ್ನೇ ಕದಡುತ್ತಿದ್ದಾರೆ.
 ಇತ್ತೀಚೆಗೆ ಕುಡಿದ ಮತ್ತಿನಲ್ಲಿ ಮಡದಿಯನ್ನೆ ಕೊಲೆ ಮಾಡಿದ್ದಲ್ಲದೆ ಅದೇ ವ್ಯಕ್ತಿ ನಶೆಯಲ್ಲಿ ಮಾನಸಿಕ ಅಸ್ವಸ್ಥನಾಗಿ ನೇಣಿಗೆ ಶರಣಾದ ಘಟನೆಗಳಿಗಿಂತ ಇನ್ನೂ ಎಂಥಾ ದುರಂತ ನಿದರ್ಶನ ಬೇಕು ಹೇಳಿ? ಸಾರಾಯಿ ಅಂಗಡಿಯಿಂದ ಊರ ಸಂಸ್ಕೃತಿ ಹಾಳಾಗುತ್ತಿದೆ. ದುಡಿಯುವ ಯುವಕರು ಕೂಡ ಕುಡಿಯುವ ಚಾಳಿಗೆ ಬಿದ್ದು ದಿವಾಳಿಯಾಗುತ್ತಿದ್ದಾರೆ.  ಚಟಕ್ಕೆ ಉತ್ತೇಜನ‌ ನೀಡುವಂಥ ವೈನ್ ಶಾಪ್ ನಮ್ಮೂರಿಗೆ ಅಗತ್ಯವಿತ್ತೇ? ಎಂದು ಪ್ರಶ್ನಿಸುವ ಜವಾಬ್ದಾರಿ ತೋರದ ಗುರು, ಹಿರಿಯರು ಇಂಥ ವ್ಯಸನ ಸಂಸ್ಕೃತಿಗೆ ಪರೋಕ್ಷವಾಗಿ ಅವಕಾಶ ಮಾಡಿ ಕೊಟ್ಟಂತಾಗುತ್ತದೆ. ಇನ್ನಾದರೂ ಸಾರ್ವಜನಿಕರು, ಗ್ರಾಪಂ ಸದಸ್ಯರು ಹಾಗೂ ಜವಾಬ್ದಾರಿಯುತ ನಾಗರಿಕರು ಎಚ್ಚೆತ್ತುಕೊಂಡು ಊರಿನ ಹಿತಕ್ಕಾಗಿ ಗ್ರಾಮೀಣ ಸಂಪ್ರದಾಯ, ಸಂಸ್ಕೃತಿಯ ಉಳಿವಿಗಾಗಿ ಜಾಗೃತರಾಗಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button