
ಪ್ರಗತಿವಾಹಿನಿ ಸುದ್ದಿ: ಒಂದೇ ದಿನ ಹೃದಯಾಘಾತಕ್ಕೆ ಮೂವರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ.
ಬೇಲೂರು ಪಟ್ಟಣದಲ್ಲಿ ಲೇಪಾಕ್ಷಿ ಎಂಬ ಮಹಿಳೆ ಇಂದು ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸುಸ್ತು ಎಂದು ಕುಳಿತಿದ್ದ ಮಹಿಳೆ ತೀವ್ರ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ.
ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ಪ್ರೊಫೇಸರ್ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುತ್ತಯ್ಯ (೫೮) ಮೃತ ದುರ್ದೌವಿ.
ಚನ್ನಪಟ್ಟಣದ ನಿವಾಸಿಯಾಗಿರುವ ಮುತ್ತಯ್ಯ ಎಂದಿನಂತೆ ಇಂದು ಬೆಳಿಗ್ಗೆ ಕಾಲೇಜಿಗೆ ಬಂದಿದ್ದರು. ಈ ವೇಳೆ ಬೈಪಾಸ್ ರಸ್ತೆಯಲ್ಲಿ ಟೀ ಕುಡಿಯಲು ಹೋಗಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ.
ಇನ್ನು ಚನ್ನರಾಯಪಟ್ಟಣದ ನುಗ್ಗೆಹಳ್ಳಿ ನಾಡಕಚೇರಿಯಲ್ಲಿ ಡಿ ಗ್ರೂಪ್ ನೌಕರರಾಗಿದ್ದ ಕುಮಾರ್ (೫೭) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.