CrimeKannada NewsKarnataka News

*ಹೆಂಡತಿ ಕೊಲೆ ಮಾಡಿ ಹೃದಯಾಘಾತ ನಾಟಕವಾಡಿದ ಪತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತನ್ನ ಹೆಂಡತಿಯ ಕತ್ತು ಹಿಚುಕಿ ಪತಿ ಕೊಲೆ ಮಾಡಿ, ಬಳಿಕ ಕೊಲೆ ಮುಚ್ಚಿಹಾಕಲು ಹೃದಯಾಘಾತ ಎಂದು ನಂಬಿಸಲು ಯತ್ನಿಸಿದ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡಗುಂಡ ಗ್ರಾಮದಲ್ಲಿ ಕೊಲೆ ನಡೆದಿದೆ. ಮಂಗಲಾ ಗಣಪತಿ ನಾಯ್ಕ (27) ಕೊಲೆಯಾದ  ಮಹಿಳೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪಿ ಪತಿ ಗಣಪತಿ ಮಂಜುನಾಥ ನಾಯ್ಕ. 

ಘಟನೆಯ ನಡೆದ ದಿನದಂದು ಗಣಪತಿ ಮಂಜುನಾಥ ನಾಯ್ಕ ಪೂರ್ಣವಾಗಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದನು. ಮನೆಯಲ್ಲಿದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ಈತ, ಮನೆಯಲ್ಲಿ ಮಲಗಿದ್ದ ಪತ್ನಿ ಮಂಗಲಾ ಅವರ ಕುತ್ತಿಗೆಯನ್ನು ಬಲವಾಗಿ ಹಿಚುಕಿ ಕೊಲೆ ಮಾಡಿದ್ದಾನೆ. ಹೆಂಡತಿ ಉಸಿರುಚೆಲ್ಲುತ್ತಿದ್ದಂತೆ ಬೆಚ್ಚಿಬಿದ್ದ ಆರೋಪಿ, ಪೊಲೀಸರು ಹಾಗೂ ಬಂಧುಗಳಿಂದ ಬಚಾವ್ ಆಗಲು ಹಾರ್ಟ್ ಅಟ್ಯಾಕ್ ನಾಟಕವಾಡಲು ಶುರು ಮಾಡಿದ್ದನು.

ಪತ್ನಿಗೆ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿ ಆಕೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ಸುಳ್ಳು ಕಥೆ ಕಟ್ಟಿ ನಂಬಿಸಲು ಯತ್ನಿಸಿದ್ದನು. ಆದರೆ, ಮಂಗಲಾ ಅವರ ಅಕಾಲಿಕ ಸಾವಿನ ಬಗ್ಗೆ ಹಾಗೂ ಆಕೆಯ ದೇಹದ ಮೇಲಿದ್ದ ಗುರುತುಗಳನ್ನು ಕಂಡು ಸಹೋದರಿಗೆ ತೀವ್ರ ಅನುಮಾನ ಮೂಡಿತ್ತು. 

ತಕ್ಷಣವೇ ಜಾಗರೂಕರಾದ ಆಕೆಯ ಕುಟುಂಬಸ್ಥರು ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣದ ಪ್ರಾಥಮಿಕ ತನಿಖೆ ಕೈಗೊಂಡ ಪೊಲೀಸರಿಗೆ ವಿಚಾರಣೆಯ ಸಮಯದಲ್ಲಿ ಪತಿ ಗಣಪತಿಯ ಅನುಮಾನಾಸ್ಪದ ವರ್ತನೆ ಹಾಗೂ ಆತ ನೀಡುತ್ತಿದ್ದ ಪರಸ್ಪರ ವಿರೋಧಾತ್ಮಕ ಹೇಳಿಕೆಗಳು ಕೊಲೆಯ ಸುಳಿವು ನೀಡಿದವು. 

ತಕ್ಷಣವೇ ಆತನನ್ನು ವಶಕ್ಕೆ ಪಡೆದ ಪೊಲೀಸರು ತಮ್ಮದೇ ಶೈಲಿಯಲ್ಲಿ ಕಠಿಣ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಯು ತಾನೇ ಕುಡಿದ ಮತ್ತಿನಲ್ಲಿ ಪತ್ನಿಯ ಕತ್ತು ಹಿಚುಕಿ ಕೊಲೆ ಮಾಡಿರುವುದಾಗಿ ನಿಜ ಬಾಯ್ದಿಟ್ಟಿದ್ದಾನೆ.

ಪತಿಯ ಸುಳ್ಳು ನಾಟಕವನ್ನು ಬಯಲಿಗೆಳೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button