ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧು -ಕೇಂದ್ರ ಘೋಷಣೆ
ಪ್ರಗತಿವಾಹಿನಿ ಸುದ್ದಿ, ನವದೆಹಲಿ –
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ವಿಧಿಯನ್ನು ಕೇಂದ್ರ ಸರಕಾರ ರದ್ಧು ಮಾಡುವುದಾಗಿ ಘೋಷಿಸಿದ್ದು, ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.
ರಾಜ್ಯಸಭೆಯಲ್ಲಿ ಇಂದು ವಿರೋಧ ಪಕ್ಷದ ಭಾರಿ ಗದ್ದಲದ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ ಶಾ ಈ ಸಂಬಂಧ ಘೋಷಣೆ ಮಾಡಿದರು. ಜಮ್ಮು ಕಾಶ್ಮೀರದಲ್ಲಿದ್ದ 370ನೇ ವಿಧಿ ಮತ್ತು 35 ಎ ರದ್ದು ಮಾಡುವುದಾಗಿ ಅವರು ಹೇಳಿದರು.
ಇದರೊಂದಿಗೆ, ಜಮ್ಮು-ಕಾಶ್ಮೀರ, ಲಡಾಕ್ ಗೆ ಕೇಂದ್ರಾಡಳಿತ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನೂ ಮಂಡಿಸಲಾಗಿದೆ.
ಆದರೆ ಇದನ್ನು ವಿರೋಧಿಸಿ ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಸದಸ್ಯರು ಕೋಲಾಹಲವೆಬ್ಬಿಸಿದರು. ಕಲಾಪವನ್ನೇ ನಡೆಸಲು ಅವಕಾಶಕೊಡದಂತೆ ಗದ್ದಲ ಉಂಟಾಯಿತು.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರದಿಂದಾಗಿ ಇಡೀ ರಾಷ್ಟ್ರದಲ್ಲಿರುವ ಕಾನೂನು ಅಲ್ಲಿನವರಿಗೆ ಅನ್ವಯಿಸುತ್ತಿರಲಿಲ್ಲ. ಅಲ್ಲಿ ಹೊರಗಿನ ವ್ಯಕ್ತಿಗಳು ಆಸ್ತಿ ಖರೀದಿಸುವಂತಿರಲಿಲ್ಲ.
ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಮುಂದುವರಿದಿದೆ. ಯಾರು ಏನು ಮಾತನಾಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ.
ಈ ನಿರ್ಧಾರದಿಂದಾಗಿ ಕೇಂದ್ರ ಸರಕಾರ ಕ್ರಾಂತಿಕಾರಕ ನಿರ್ಣಯ ತೆಗೆದುಕೊಂಡಂತಾಗಿದೆ. ಪ್ರಸ್ತಾವನೆಗೆ ರಾಷ್ಟ್ರಪತಿ ಸಹಿ ಹಾಕಿದ್ದು, ಗೆಜೆಟ್ ನಲ್ಲೂ ಪ್ರಕಟವಾಗಿದೆ.
ಇನ್ನು ಮುಂದೆ ಜಮ್ಮು -ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತವಾಗಲಿದ್ದು, ರಾಜ್ಯದ ಸ್ಥಾನಮಾನ ರದ್ದಾಗಿದೆ.
ಇದನ್ನೂ ಓದಿ – ಜಮ್ಮು-ಕಾಶ್ಮೀರ ವಿದ್ಯಮಾನ : ರಾಷ್ಟ್ರಾದ್ಯಂತ ಹೈ ಅಲರ್ಟ್ -ಕೆಲವೇ ಕ್ಷಣದಲ್ಲಿ ಕೇಂದ್ರ ನಿರ್ಧಾರ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ