*ಸೆ.25 ಹಾಗೂ 26ರಂದು ರಾಜ್ಯದ ಯಾವ ಯಾವ ನಗರಗಳು ಸಂಪೂರ್ಣ ಬಂದ್? ಇಲ್ಲಿದೆ ಮಾಹಿತಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಸೆ.26ರಂದು ರಾಜಧಾನಿ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದ್ದು, ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ರಾಜಧಾನಿ ಬೆಂಗಳೂರು ಸಂಪೂರ್ಣ ಸ್ತಬ್ಧಗೊಳ್ಳಲಿದೆ.
ಸೆ.25 ಹಾಗೂ 26ರಂದು ರಾಜ್ಯದ ಬೇರೆ ಬೇರೆ ನಗರಗಳು ಕೂಡ ಬಂದ್ ಆಗಲಿವೆ. ಕಾವೇರಿ ನೀರಿಗಾಗಿ ಆಗ್ರಹಿಸಿ ಸೆ.26ರಂದು ಬೆಂಗಳೂರು ಬಂದ್ ಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದೆ. ಬಂದ್ ಗೆ ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್ ಸಂಘಟನೆಗಳು, ಓಲಾ, ಊಬರ್, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ.
ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು, ಐಟಿ ಬಿಟಿ ಕಂಪನಿಗಳು, ಕೈಗಾರಿಕೋದ್ಯಮಿಗಳು, ಶಾಲಾ-ಕಾಲೇಜುಗಳು ಸ್ವಯಂಪ್ರೇರಿತವಾಗಿ ಸೆ.26ರಂದು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲಿಸುವಂತೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಮಂಗಳವಾರ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಸಾರಿಗೆ ಸಂಚಾರ ಕೂಡ ಬಂದ್ ಆಗುವುದು ನಿಶ್ಚಿತವಾಗಿದೆ.
ಈ ನಡುವೆ ಸೆ.26ರಂದು ಕನ್ನಡಪರ ಸಂಘಟನೆಗಳು ರಾಮನಗರ ಜಿಲ್ಲಾ ಬಂದ್ ಗೆ ಕರೆ ನೀಡಿವೆ. ರಾಮನಗರ, ಚೆನ್ನಪಟ್ಟಣ, ಬಿಡದಿ, ಮಂಡ್ಯದ ಕೆ.ಆರ್.ಪೇಟೆ ಪಟ್ಟಣ ಸಂಪೂರ್ಣ ಬಂದ್ ಆಗಲಿದ್ದು, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ವಾಹನ ತಡೆದು ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸುವ ಬಗ್ಗೆಯೂ ಸಂಘಟನೆಗಳು ಸಿದ್ಧತೆ ನಡೆಸಿವೆ.
ಇನ್ನೊಂದೆಡೆ ಭದ್ರಾ ಡ್ಯಾಂ ನಿಂದ ನೀರು ಸ್ಥಗಿತಗೊಂಡಿರುವುದನ್ನು ಖಂಡಿಸಿ ಭಾರತೀಯ ರೈತ ಒಕ್ಕೂಟ ಸೆ.25ರಂದು ದಾವಣಗೆರೆ ಬಂದ್ ಗೆ ಕರೆ ನೀಡಿದೆ. ಭದ್ರಾ ಕಾಲುವೆಗೆ ನೀರು ಹರಿಸುವುದಾಗಿ ಲಿಖಿತವಾಗಿ ಆದೇಶ ನೀಡುವಂತೆ ರೈತ ಒಕ್ಕೂಟ ಒತ್ತಾಯಿಸಿದೆ.
ಇನ್ನು ಬರ ಪೀಡಿತ ತಾಲೂಕಿನಿಂದ ಗದಗ ಜಿಲ್ಲೆ ಮುಂಡರಗಿ ತಾಲೂಕು ಕೈಬಿಟ್ಟಿದ್ದಕ್ಕೆ ಸೆ.26ರಂದು ರೈತರು ಮುಂಡರಗಿ ಬಂದ್ ಗೆ ಕರೆ ನೀಡಿದ್ದಾರೆ.
ಒಟ್ಟಾರೆ ಸೆ.25 ಹಾಗೂ 26ರಂದು ರಾಜ್ಯದ ವಿವಿಧ ನಗರಗಳು ಬಂದ್ ಆಗಲಿದ್ದು, ರೈತರು, ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ