*ಕಿರಣ ನಿಪ್ಪಾಣಿಕರ್ ವಾರಾಣಸಿಯಲ್ಲಿ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉದ್ಯಮಿ, ಪರಿಸರ ಪ್ರೇಮಿ ಕಿರಣ ನಿಪ್ಪಾಣಿಕರ್ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಕ್ಯಾಂಪ್ ಪ್ರದೇಶದಲ್ಲಿ ಬಿಕಾನೇರ್ ಮಿಠಾಯಿವಾಲಾ ಎನ್ನುವ ಹೊಟೆಲ್ ನಡೆಸುತ್ತಿದ್ದ ಕಿರಣ ನಿಪ್ಪಾಣಿಕರ್, ಪ್ಯಾಸ್ ಫೌಂಡೇಶನ್ ಮತ್ತು ಶೂನ್ಯ ಫೌಂಡೇಶನ್ ಎನ್ನುವ ಸ್ಾವಯಂ ಸೇವಾ ಸಂಸ್ಥೆಗಳ ಮೂಲಕ ಪರಿಸರ ಉಳಿಸುವ, ಜಲಮೂಲಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದರು. ಗಿಡಗಳನ್ನು ಸ್ಥಳಾಂತರಿಸುವ ಮತ್ತು ಕೆರೆಗಳನ್ನು ಪುನರುಜ್ಜೀವನಗೊಳಿಸುವ ಉಪಯುಕ್ತ ಕೆಲಸಗಳನ್ನು ಮಾಡಿದ್ದಾರೆ.
ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಅವರು ಅಲ್ಲಿಂದ ವಾರಾಣಸಿಗೆ ಭೇಟಿ ನೀಡಿ ಬರಲು ಹೋಗಿದ್ದರು. ಅಲ್ಲಿಯೇ ಬುಧವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಹೃದಯಾಘಾತವಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಸುಮಾರು 12 ಗಂಟೆಗಳ ಕಾಲ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ರಾತ್ರಿ 3 ಗಂಟೆಗೆ ಅವರು ನಿಧನರಾಗಿದ್ದಾರೆಂದು ವೈದ್ಯರು ಘೋಷಿಸಿದರು.
ಮಹಾನಗರ ಪಾಲಿಕೆ ಎಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ್ ಅವರ ಸಹೋದರರಾಗಿದ್ದ ಕಿರಣ್, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಹೊಂದಿದ್ದರು.
ಶುಕ್ರವಾರ ಬೆಳಗ್ಗೆ ಅವರ ಮೃತದೇಹ ಬೆಳಗಾವಿಗೆ ಆಗಮಿಸಿದ್ದು, ಇನ್ನು ಸ್ವಲ್ಪ ಹೊತ್ತಿನಲ್ಲಿ ಸದಾಶಿವನಗರ ಸ್ಮಶಾನ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ