Belagavi NewsBelgaum NewsEducationKannada NewsKarnataka NewsPragativahini Special

*ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ ಕುಕಡೊಳ್ಳಿ ಸರ್ಕಾರಿ ಶಾಲೆ*

ಪ್ರಗತಿವಾಹಿನಿ ಸುದ್ದಿ: ಅಂದು ಊರಿನ ಗ್ರಾಮದೇವಿ ಹಾಗೂ ಕಲ್ಮೇಶ್ವರ ದೇವಸ್ಥಾನದಲ್ಲಿ ಪ್ರಾರಂಭವಾದ ಸರ್ಕಾರಿ ಶಾಲೆಯೊಂದು ಬರೋಬ್ಬರಿ ನೂರು ವಸಂತಗಳನ್ನು ಪೂರೈಸಿದ್ದು, ಶತಮಾನೋತ್ಸವ ಆಚರಣೆಗೆ ಕುಕಡೊಳ್ಳಿಯ ಉನ್ನತೀಕರಿಸಿದ ಸರ್ಕಾರಿ ಕನ್ನಡ ಶಾಲೆ ಅಣಿಯಾಗಿದೆ.

ಶಾಲೆಯ ಇತಿಹಾಸ:
1925ರ ಸುಮಾರಿಗೆ ದೇಶದಲ್ಲಿ ಬ್ರಿಟೀಷರ ಆಳ್ವಿಕೆ ಇತ್ತು. ಆಗ ದೇಶದಲ್ಲಿ ಕೆಲವೇ ಕೆಲವು ಶಾಲೆಗಳು ಅಸ್ತಿತ್ವದಲ್ಲಿದ್ದವು. ಅವುಗಳಲ್ಲಿ ಕುಕಡೊಳ್ಳಿ ಶಾಲೆಯೂ ಒಂದು. ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಶಾಲೆಯು ಇಂದು ನೂರು ವರ್ಷದ ಸಂಭ್ರಮಾಚರಣೆಯಲ್ಲಿರುವುದು ಹೆಮ್ಮೆಯ ಸಂಗತಿ.

1925 ನವೆಂಬರ್ 09ರಂದು ಪ್ರಾರಂಭವಾದ ಶಾಲೆ ಮೊದಲು ಊರಿನ ಗ್ರಾಮದೇವಿ ಹಾಗೂ ಕಲ್ಮೇಶ್ವರ ದೇವಸ್ಥಾನಗಳ, ಅರಳಿ ಮರ, ಬೇವಿನ ಗಿಡದ ಕೆಳಗೆ ಪ್ರಾರಂಭಗೊಂಡಿತು.

ಈ ಶಾಲೆಯಲ್ಲಿ ಶಿಕ್ಷಣ ಕಲಿತವರೆಲ್ಲ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಶಿಕ್ಷಕರು, ಪ್ರಾಂಶುಪಾಲರು, ತಹಶಿಲ್ದಾದಾರರು , ಸೈನಿಕರು, ವಕೀಲರು, ಇಂಜಿನಿಯರ್ ಗಳು, ಉದ್ಯಮಿಗಳು ಸೇರಿದಂತೆ ಅನೇಕ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಎಷ್ಟೋ ಹಳೇ ವಿಧ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

Home add -Advt

ಶಾಲೆಯ ಮಾಜಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು ಹಾಗೂ ಹಳೆಯ ವಿದ್ಯಾರ್ಥಿ ವಕೀಲರಾದ ಅಣ್ಣಪ್ಪ ಲಕಮೋಜಿ ಈ ಬಗ್ಗೆ ಮಾತನಾಡಿದ್ದು, ಶಾಲೆಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಒಂದು ಅದ್ದೂರಿ ಕಾರ್ಯಕ್ರಮ ನಡೆಸಬೇಕೆಂದು ತೀರ್ಮಾನಿಸಲಾಗಿತ್ತು. ಅದು ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘಟನೆ ಹಾಗೂ ಶಿಕ್ಷಕರ ಹುರುಪಿನಿಂದ ಹಿರಿಯರ ಮಾರ್ಗದರ್ಶನದಲ್ಲಿ ದೊಡ್ಡಮಟ್ಟದ ಕಾರ್ಯಕ್ರಮವಾಗಿ ಮಾರ್ಪಟ್ಟಿದ್ದು ಖುಷಿ ತಂದಿದೆ ಎಂದಿದ್ದಾರೆ.

ಧಾನಿಗಳ ಕೊಡುಗೆ ಅಪಾರ:
ಅಮೇರಿಕಾದ ಜಮ್ಮಾ ಜಮ್ಮಾ ಫೌಂಡೇಷನ್‌ ವಿಜ್ಞಾನದ ಸಲಕರಣೆ, ಬೆಳಗಾವಿಯ ರಾಜಲಕ್ಷ್ಮೀ ಚಿಲ್ಡ್ರನ್ ಫೌಂಡೇಷನ್ ಅವರಿಂದ ಕಂಪ್ಯೂಟರ್ , ಊರಿನ ಸೈನಿಕರು ನೀರು ಶುದ್ದೀಕರಣದ ನಾಲ್ಕು ಘಟಕ , ತಾಯಂದಿರು 100 ಪ್ಲಾಸ್ಟಿಕ್ ಖುರ್ಚಿ, ಟೇಬಲ್, ಪುಸ್ತಕ ಸೇರಿದಂತೆ ಆರ್ಥಿಕ ಸಹಾಯನ್ನು ಹಾಗೂ ಇತರ ಸಹಾಯ-ಸಹಕಾರ ನೀಡಿದ್ದಾರೆ. ಇತ್ತೀಚೆಗೆ ಶಾಲೆಗೆ ಬಣ್ಣ ಹಚ್ಚಿ ಮದುವಣಗಿತ್ತಿಯಂತೆ ವಿವಿಧ ಚಿತ್ರಗಳಿಂದ ಅಲಂಕಾರ ಮಾಡಲಾಗಿದೆ. ಶತಮಾನದ ಸಂಭ್ರಮದಲ್ಲಿದ್ದ ಸರ್ಕಾರಿ ಶಾಲೆಗೆ ಕನ್ನಡ ಮನಸ್ಸುಗಳು ಬೆಂಗಳೂರು ತಂಡ ಬಣ್ಣ ಹಚ್ಚಿ ಹೊಸ ಮೆರುಗು ನೀಡಿದೆ. ಅನೇಕ ದಾನಿಗಳು ಶಾಲೆಗೆ ಹಲವು ಸಾಮಗ್ರಿಗಳನ್ನು ನೀಡಿದ್ದಾರೆ.

ಹಳೆಯ ವಿದ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳು ಶಾಲೆಯ ನವೀಕರಣಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಶಾಲೆಯಲ್ಲಿ ಆಗಬೇಕಾದ ಕೆಲಸಗಳು ಬಿರುಸಿನಿಂದ ಸಾಗಿವೆ.

ಶಿಕ್ಷಕರು, ಗ್ರಾಮದ ಗುರು ಹಿರಿಯರು ಹಳೆ ವಿದ್ಯಾರ್ಥಿಗಳ ಸಂಘಟನೆಯ ಪದಾಧಿಕಾರಿಗಳು , ಗ್ರಾಮಸ್ಥರು ಎಲ್ಲರೂ ಸೇರಿ ಶಾಲೆಯ ಬಗ್ಗೆ ತುಂಬಾ ಕಾಳಜಿ ವಹಿಸಿ ಕಾರ್ಯಗಳನ್ನು ಮಾಡುತ್ತಿರುವುದರಿಂದ ಶಾಲೆಯ ಅಭಿವೃದ್ಧಿ ಹೆಚ್ಚಾಗಿದೆ ಎಂದು ಪ್ರಭಾರಿ ಮುಖ್ಯೋಪಾಧ್ಯಾಯ ನಾಗಪ್ಪ ಕರವಿನಕೊಪ್ಪ ಅವರು ಹೇಳಿದರು.

ಹೀಗೆ ಶಾಲೆ ಏಳು ಬೀಳು ಕಂಡು ಒಂದು ಹಂತಕ್ಕೆ ತಲುಪಿ ಎತ್ತರದ ಮಟ್ಟಕ್ಕೆ ಬೆಳೆದು ನಿಂತಿದೆ. ಶಾಲೆಯು ಸಾಕಷ್ಟು ಪ್ರಶಸ್ತಿ ಪಡೆದುಕೊಂಡಿದೆ. ತಾಲೂಕ, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ಮತ್ತು ಆಟ-ಪಾಠಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ. ಒಂದರಿಂದ ಎಂಟನೆಯ ತರಗತಿಯವರೆಗೆ ಮಕ್ಕಳಿಗೆ ಅವಶ್ಯಕತೆ ಇರುವ ಕಟ್ಟಡ ಹೊಂದಿ ನುರಿತ ಶಿಕ್ಷಕರನ್ನು ಒಳಗೊಂಡು ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವನ್ನು ತೀರಿಸುತ್ತಿದೆ. ಅದೇ ರೀತಿ ಇಲ್ಲಿನ ಮುಖ್ಯಾಧ್ಯಾಪಕರು ಹಾಗೂ ಸಹ ಶಿಕ್ಷಕರು ಉತ್ಸಾಹದಿಂದಲೇ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಆದ್ದರಿಂದ ಕುಕಡೊಳ್ಳಿ ಸರ್ಕಾರಿ ಶಾಲೆಯ ರೂಪುರೇಷೆಯೇ ಸಾಕಷ್ಟು ಬದಲಾಗಿದೆ.

ಲಕ್ಷ್ಮೀ ಹೆಬ್ಬಾಳಕರ್ ಮುತುವರ್ಜಿ

ಸದ್ಯ ಶಾಲೆಯಲ್ಲಿ 1ರಿಂದ 9ನೇ ತರಗತಿಯವರೆಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ದಿನದಿಂದ ದಿನಕ್ಕೆ ಶಾಲೆ ಅಭಿವೃದ್ಧಿ ಹೊಂದುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮುತುವರ್ಜಿಯಿಂದ ಇದೇ ವರ್ಷ ಪ್ರೌಢಶಾಲೆ 9ನೇ ತರಗತಿ ಪ್ರಾರಂಭಿಸಿದೆ.

ಪ್ರೌಢ ಶಾಲೆ ಮಕ್ಕಳಿಗೆ ವಿಶಾಲವಾದ ಆಟದ ಮೈದಾನ ಮತ್ತು ನಾಲ್ಕು ಕೊಠಡಿಗಳ ಅವಶ್ಯಕತೆ ಇದೆ. ಗ್ರಾಮದಲ್ಲಿನ ಶಿಕ್ಷಣ ಪ್ರೇಮಿಗಳು ಜನ ಪ್ರತಿನಿಧಿಗಳು ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಗಮನ ಸೆಳೆದರೆ ಸರ್ಕಾರಿ ಶಾಲೆಯೊಂದು ಮತ್ತಷ್ಟು ಅಭಿವೃದ್ಧಿಯಾಗಲಿದೆ, ಗ್ರಾಮದಲ್ಲಿರುವ ಕೂಲಿ ಕಾರ್ಮಿಕರ, ಬಡ ರೈತರ ಮಕ್ಕಳಿಗೆ ಶಿಕ್ಷಣ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ ಎಂದು ಎಸ್ ಡಿಎಂ ಸಿ ಸದಸ್ಯ ಬಿಷ್ಠಪ್ಪ ಹುಡೇದ ಅಭಿಪ್ರಾಯಪಟ್ಟಿದ್ದಾರೆ.

ಶತಮಾನೋತ್ಸವದ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಶಾಲೆಯ ಹಾಲಿ-ಮಾಜಿ ವಿದ್ಯಾರ್ಥಿಗಳು, ಪಾಲಕರು ಮತ್ತು ಊರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು SDMC ಅಧ್ಯಕ್ಷ ಮಾರುತಿ ಸಾರಾವರಿ ಕರೆ ನೀಡಿದ್ದಾರೆ.

Related Articles

Back to top button