
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಪ್ರಧಾನಿ ಮೋದಿಯವರು ನಾಳೆ ರಾಜ್ಯಕ್ಕೆ ಬರುತ್ತಿರುವುದು ಯುವಜನೋತ್ಸವಕ್ಕಲ್ಲ, ಯುವಜನ ನಾಶೋತ್ಸವಕ್ಕೆ,” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ಇಲ್ಲಿನ ಆಟೋ ನಗರದ ಅಂಜುಮನ್ ಸಂಸ್ಥೆಯ ಮೈದಾನದಲ್ಲಿ ಬುಧವಾರ ‘ಪ್ರಜಾ ಧ್ವನಿ’ ಯಾತ್ರೆಯ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿ, “ಬಿಜೆಪಿ ಎಂದರೆ ಸುಳ್ಳುಗಳನ್ನು ತಯಾರು ಮಾಡುವ ಫ್ಯಾಕ್ಟರಿ. ವಚನ ಭ್ರಷ್ಟ ಸರಕಾರ. ಕರ್ನಾಟಕದಲ್ಲಿ ‘ಅಲಿಬಾಬಾ ಮತ್ತು ನಲ್ವತ್ತು ಕಳ್ಳರ ಸರಕಾರವಿದೆ. ಭ್ರಷ್ಟಾಚಾರ ತಾಂಡವ ತುಂಬಿ ತುಳುಕುತ್ತಿದೆ. ಇಂಥ ಸರಕಾರ ಬೇಕೇ? ಎಂದು ಜನರೇ ತೀರ್ಮಾನ ಮಾಡಬೇಕು,” ಎಂದರು.
“ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಪ್ರಣಾಳಿಕೆಯಲ್ಲಿ ಸುಮಾರು 600 ಭರವಸೆ ನೀಡಿದ್ದರು. ಇದರಲ್ಲಿ ಕೇವಲ 60 ಭರವಸೆ ಈಡೇರಿಸಿದ್ದಾರೆ. ಇದು ಜನರಿಗೆ ಮಾಡಿದ ಮೋಸ. ವಚನ ಭ್ರಷ್ಟತೆ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಬಿಜೆಪಿ ಒಂದು ರೂಪಾಯಿಯಾದರೂ ರೈತರ ಸಾಲ ಮನ್ನಾ ಮಾಡಿದೆಯೇ ಎಂಬುದಕ್ಕೆ ಬಸವರಾಜ ಬೊಮ್ಮಾಯಿ ಉತ್ತರಿಸಲಿ,” ಎಂದು ಸವಾಲೆಸೆದರು.
ರಾಜ್ಯದ ನೀರಾವರಿ ಯೋಜನೆಗೆ 1 .50ಲಕ್ಷ ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ನೀಡಿದ್ದ ಬಿಜೆಪಿ ಸರಕಾರ ಖರ್ಚು ಮಾಡಿದ್ದು ಕೇವಲ 45 ಸಾವಿರ ಕೋಟಿ. ದೊಡ್ಡ ಭರವಸೆ ಕೊಟ್ಟು ಜನರ ಮನಸ್ಸಿನಲ್ಲಿ ಆಸೆ ಹುಟ್ಟಿಸಿ ನಂತರ ಮೋಸ ಮಾಡಲಾಗಿದೆ,” ಎಂದು ಜರಿದರು.
“ರಾಜ್ಯದಲ್ಲಿ 25 ಸಂಸದರಿದ್ದರೂ ಅವರಾರಿಗೂ 15ನೇ ಹಣಕಾಸು ಆಯೋಗದ ಯೋಜನೆಯ 5,495 ಕೋಟಿ ಅನುದಾನ ಕೇಳಲು ದಮ್ ಇಲ್ಲ. ತಾಕತ್ತೂ ಇಲ್ಲ. ಇಂಥ ಹೇಡಿ ಸರಕಾರ ರಾಜ್ಯದಲ್ಲಿ ಮತ್ತೆ ಬರಬಾರದು,” ಎಂದರು.
“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತು ಎತ್ತಿದ್ದರೆ ಧರ್ಮ ಇದ್ದರೆ, ತಾಕತ್ತು ಇದ್ದರೆ ಎಂದೆಲ್ಲ ಹೇಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವಾಗ ರಾಜ್ಯದ ಬಿಜೆಪಿ ನಾಯಕರು ಗಡಗಡ ನಡುಗುತ್ತಾರೆ,” ಎಂದು ಲೇವಡಿ ಮಾಡಿದರು.
“ಪ್ರಜಾ ಧ್ವನಿ ಕಾಂಗ್ರೆಸ್ ಧ್ವನಿಯಲ್ಲ, ಇಡೀ ಕರ್ನಾಟಕದ ಏಳು ಕೋಟಿ ಜನರ ಧ್ವನಿ. ನಿಮ್ಮ ಸಲಹೆ ಕೇಳಿ ಜನರ ಆಶೀರ್ವಾದಿಂದ ಅಧಿಕಾರಕ್ಕೆ ಬಂದರೆ ಜನಪರ ಆಡಳಿತ ಕೊಡಬೇಕು ಎನ್ನುವ ಉದ್ದೇಶದಿಂದ ಈ ಯಾತ್ರೆ ಮಾಡಲಾಗುತ್ತಿದೆ,” ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, “ರಾಜ್ಯದ ಜನರ, ಬೆಲೆ ಏರಿಕೆ ಬಗ್ಗೆ ಸ್ಪಂದಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು,” ಎಂದು ಭರವಸೆ ನೀಡಿದರು.
“ಆಪರೇಷನ್ ಕಮಲದಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಏನಾದರೂ ಕೊಡುಗೆ ನೀಡಿದೆಯೆ? ಎಂದು ಪ್ರಶ್ನಿಸಿದ ಅವರು, ರೈತರ ಸಾಲ ಮನ್ನಾ ಸೇರಿದಂತೆ ಹತ್ತು ಹಲವು ಭರವಸೆ ನೀಡಿದ್ದರು. ಅಧಿಕಾರ ಇದ್ದಾಗಲೇ ಅವರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಅಧಿಕಾರ ಇಲ್ಲದೆ ಏನು ಮಾಡುತ್ತಾರೆ?,” ಎಂದು ಪ್ರಶ್ನಿಸಿದರಲ್ಲದೆ, ಅಲ್ಪಸಂಖ್ಯಾತರು, ಕ್ರಿಶ್ಚಿಯನ್ ರ ಮತಗಳನ್ನು ಬಿಜೆಪಿ ಕದಿಯುವ ಹುನ್ನಾರ ನಡೆಸಿದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪ ತೊಡಬೇಕು ಎಂದರು.
“ರಾಜ್ಯ ಬಿಜೆಪಿ ಸರಕಾರಕ್ಕೆ ’40 ಪರ್ಸೆಂಟ್ ಸರಕಾರ’ ಎಂದು ಹೆಸರು ಬಂದಿದೆ. ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಕೆ.ಎಸ್. ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್ ನೀಡಲಾಗಿದೆ ಅಲ್ಲದೆ, ಆಪರೇಷನ್ ಕಮಲಕ್ಕೆ ಒಳಗಾದ ಬೆಳಗಾವಿಯ ಒಬ್ಬ ಸಚಿವರಾಗಿದ್ದವರು ಮಂಚದ ಮೇಲೆ ಸಿಕ್ಕಿಬಿದ್ದಿದ್ದು ಅವರಿಗೂ ಬಿ ರಿಪೋರ್ಟ್ ಕೊಟ್ಟಿದೆ,” ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.
“ಕಾಂಗ್ರೆಸ್ ಗೆ ಅಧಿಕಾರ ಮುಖ್ಯವಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರನ್ನು ಖಷಿಯಿಂದ ಇಡಬೇಕು ಎನ್ನುವ ಉದ್ದೇಶ ಇದೆ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಲು ಮಹಿಳೆಯರಿಂದಲೇ ಸಲಹೆಗಳನ್ನು ಆಹ್ವಾನಿಸಲಾಗಿದೆ. ಜ.16 ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಾಂಧಿ ಪ್ರಣಾಳಿಕೆ ಘೋಷಿಸಲಿದ್ದಾರೆ,” ಎಂದರು.
ರಾಜ್ಯಸಭಾ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಮಾತನಾಡಿ, “ಕೆಪಿಸಿಸಿಯಿಂದ ಆಯೋಜಿಸಲಾಗಿರುವ ‘ಪ್ರಜಾ ಧ್ವನಿ’ ಯಾತ್ರೆ ಐತಿಹಾಸಿಕ ನಿರ್ಣಯವಾಗಲಿದೆ. ಇದು ಕರ್ನಾಟಕ ಜನರ ಧ್ವನಿಯಾಗಲಿದೆ. ರಾಜ್ಯದ ರೈತರ, ಯುವ ಸಮುದಾಯ,ಮಹಿಳೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮುದಾಯದ ಜನರ ಧ್ವನಿಯನ್ನು ಜನರ ಮುಂದೆ ಕಾಂಗ್ರೆಸ್ ನಾಯಕರು ಎತ್ತಿದ್ದಾರೆ,” ಎಂದರು.
ಕರ್ನಾಟಕದ ಬಸವರಾಜ ಬೊಮ್ಮಾಯಿ ಸರಕಾರ ದೇಶದ ಅತ್ಯಂತ ಭ್ರಷ್ಟ ಸರಕಾರ. ಪ್ರತಿ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ಪಾಟೀಲ ಬಿಜೆಪಿ ಕಾರ್ಯಕರ್ತ. ಅವರು ಪ್ರತಿ ಬಾರಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು. ಅವರ ಪಕ್ಷ ಅಧಿಕಾರ ಬಂದ ಮೇಲೆ ಸಣ್ಣ ಕೆಲಸ ಮಾಡಿಕೊಂಡಿದ್ದರು. ಆದರೆ ಅವರು ಕೆಲಸ ಮಾಡಿದ್ದಕ್ಕೆ ಸಚಿವರೊಬ್ಬರು ಶೇ. 40 ಕಮಿಷನ್ ಕೇಳಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾವು ಶೇ.40 ಕಮಿಷನ್ ಕೊಡುತ್ತೇವೆ. ಸಂತೋಷ ಪಾಟೀಲ ಜೀವ ಮರಳಿ ಕೊಡಲು ಸಾಧ್ಯವಾದೀತೇ?,” ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರದ ಜನರು ಭ್ರಷ್ಟಾಚಾರದ ಅಂಗಡಿ ತೆಗೆದಿರುವುದಕ್ಕೆ ದೇವರು ಸಹ ಕ್ಷಮೆ ಮಾಡುವುದಿಲ್ಲ. ಅವರೆಲ್ಲ ನರಕಕ್ಕೆ ಹೋಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದೇಶದ ದುರ್ಬಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದಲ್ಲಿ ಅಮಿತ್ ಶಾ ಮುಂದೆ ಕರ್ನಾಟಕದ ಒಂದು ಇಂಚೂ ಮಹಾರಾಷ್ಟ್ರಕ್ಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳುವ ಧೈರ್ಯ ತೋರಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಹಿತಕ್ಕಿಂತ ಮುಖ್ಯಮಂತ್ರಿ ಕುರ್ಚಿ ಮುಖ್ಯವಾಗಿದೆ,” ಎಂದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಮಾತನಾಡಿ, “ಭಾರತ ದೇಶ ಯಾರಪ್ಪನ ಆಸ್ತಿಯೂ ಅಲ್ಲ, ಎಲ್ಲ ಸಮುದಾಯದವರ ಆಸ್ತಿ. ಮುಂಬರುವ ಚುನಾವಣೆ ರಾಜ್ಯದ ಜನರ ಭವಿಷ್ಯದ ಚುನಾವಣೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಗೆ ರಾಜ್ಯದ ಅಭಿವೃದ್ಧಿ ವಿಚಾರ ಬೇಡ. ಆದರೆ ಲವ್ ಜಿಹಾದ್ ಬಗ್ಗೆ ಧ್ವನಿ ಎತ್ತಿ ಎಂದು ಅವರ ಕಾರ್ಯಕರ್ತರಿಗೆ ಕರೆ ನೀಡಿರುವುದು ನಾಚಿಗೇಡಿತನದ ಸಂಗತಿ,” ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, “ಪ್ರಜಾ ಧ್ವನಿ ಯಾತ್ರೆ ಜನರ ಧ್ವನಿ. ಕೊರೊನಾ ಸಂದರ್ಭದಲ್ಲಿ ಸರಕಾರ ಮಾಡದ ಕೆಲಸವನ್ನು ಪ್ರತಿಪಕ್ಷವಾಗಿ ಕಾಂಗ್ರೆಸ್ ಮಾಡಿದೆ. ರಾಜ್ಯದಲ್ಲಿ ಒಳ್ಳೆಯ ಸರಕಾರ ಬರಬೇಕಾದರೆ ಎಲ್ಲರ ಬೆಂಬಲ ಅಗತ್ಯ,” ಎಂದರು.
ಬೆಳಗಾವಿಯಲ್ಲಿ ಶೇ. ನೂರರಷ್ಟು ಭ್ರಷ್ಟಾಚಾರದ ಬಗ್ಗೆ ಯಾರೂ ಬೆಳಕು ಚೆಲ್ಲುತ್ತಿಲ್ಲ ಅದನ್ನು ಮುಂಬರುವ ದಿನಗಳಲ್ಲಿ ಜನರ ಮುಂದೆ ತರುವ ಕೆಲಸ ಮಾಡುತ್ತೇವೆ. ಬೆಳಗಾವಿ ನಗರಾಭಿವೃದ್ಧಿ ಇಲಾಖೆ, ಸ್ಮಾರ್ಟ್ ಸಿಟಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅದನ್ನು ಬೆಳಗಾವಿ ದಕ್ಷಿಣದಿಂದ ನಡೆಸಬೇಕೋ ಉತ್ತರ ಮತಕ್ಷೇತ್ರದಿಂದ ನಡೆಸಬೇಕೋ ಎಂದು ತಿಳಿಯುತ್ತಿಲ್ಲ. ಬುಡಾದಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದರ ಮೇಲೆ ಕಾಂಗ್ರೆಸ್ ನಾಯಕರು ಬೆಳಕು ಚೆಲ್ಲುವ ಅಗತ್ಯವಿದೆ,” ಎಂದರು.
“,ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಮೇಯರ್ ಚುನಾವಣೆ ನಡೆದಿಲ್ಲ. ಇಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರು ಹಾಗೂ ಉತ್ತರ ಮತಕ್ಷೇತ್ರದ ಶಾಸಕರ ಮುಖ ನೋಡಿಕೊಂಡು ಪಾಲಿಕೆ ಸದಸ್ಯರು ನಿಲ್ಲುವ ಪರಿಸ್ಥಿತಿ ಇದೆ. ಇದು ಕೇವಲ ಬೆಳಗಾವಿಯಲ್ಲಿ ಮಾತ್ರವಲ್ಲ ರಾಜ್ಯದ ಬಹುತೇಕ ಕಡೆಯಲ್ಲಿ ಇದೇ ರೀತಿ ನಡೆದಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಬಸವರಾಜ ರಾಯರಡ್ಡಿ, ಡಿ.ಬಿ.ಇನಾಮದಾರ, ವಿನಯ ಕುಲಕರ್ಣಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಮಹಾಂತೇಶ ಕೌಜಲಗಿ, ಚನ್ನರಾಜ ಹಟ್ಟಿಹೊಳಿ, ನಾಗರಾಜ ಯಾವಗಲ, ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕ ಫಿರೋಜ್ ಸೇಠ್, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರದಾಧ್ಯಕ್ಷ ರಾಜು ಸೇಠ್, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ ಮತ್ತಿತರರು ವೇದಿಕೆಯಲ್ಲಿದ್ದರು.
ಫೆ. 17ರಂದು ರಾಜ್ಯ ಬಜೆಟ್: ಮುಖ್ಯಮಂತ್ರಿ ಬೊಮ್ಮಾಯಿ
https://pragati.taskdun.com/karnataka-state-budget-on-feb-17th-chief-minister-bommai/
https://pragati.taskdun.com/ex-mlaias-officergang-rape-casecase-filebiharapatna/
ಸ್ಮಶಾನ ಕಾರ್ಮಿಕರು ಇನ್ನು ಸತ್ಯ ಹರಿಶ್ಚಂದ್ರ ಬಳಗ : ಸಿಎಂ ಬಸವರಾಜ ಬೊಮ್ಮಾಯಿ
https://pragati.taskdun.com/graveyard-workers-are-now-satya-harishchandra-balaga-cm-basavaraja-bommai/