*ಜನಪರ ಕಾಳಜಿ ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ಬೆಂಬಲ
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷ ರಾಮ ರಾಜ್ಯ ಪರಿಕಲ್ಪನೆ ಹೊಂದಿದೆ. ಬಸವಣ್ಣನವರ ತತ್ವ ಸಿದ್ದಾಂತ, ಅಂಬೇಡ್ಕರ್ ಬರೆದ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಗೋಕಾಕ್ ವಿಧಾನಸಭಾ ಕ್ಷೇತ್ರದ ಬೆಣಚಿನಮರಡಿ, ಮಮದಾಪೂರ, ಹೂಲಿಕಟ್ಟಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಸಚಿವರು ಮತಯಾಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ದೂರದೃಷ್ಟಿಯ ಫಲವಾಗಿ ಕಳೆದ ವರ್ಷ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ವಾರ್ಷಿಕ 56 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ, ನಾವು ತಂದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಿಕ್ಕ ಗೆಲುವು ಎಂದು ಹೇಳಿದರು.
ಎಚ್ಚರಿಕೆಯಿಂದ ಮತದಾನ ಮಾಡಿ
ಕಳೆದ 25 ವರ್ಷಗಳಿಂದ ಒಂದೇ ಪಕ್ಷದ ಸಂಸದರನ್ನು ಗೆಲ್ಲಿಸಿದರೂ ಕ್ಷೇತ್ರಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಹೊರಗಿನ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಲಾಗಿದೆ. ಅವಕಾಶವಾದಿ ರಾಜಕಾರಣಿಯಿಂದ ಕ್ಷೇತ್ರವನ್ನು ದೂರವಿಡಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದರು. ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡುವ ಮನಸ್ಥಿತಿ ಬೇಕು. ಕಳೆದ ಅವಧಿಯಲ್ಲಿ ನಾವು ವಿರೋಧ ಪಕ್ಷದಲ್ಲಿದ್ದರೂ ನಾನು 1800 ಕೋಟಿ ಅನುದಾನವನ್ನು ನನ್ನ ಗ್ರಾಮೀಣ ಕ್ಷೇತ್ರಕ್ಕೆ ತಂದೆ. ಇದೇ ಮಾದರಿಯಲ್ಲಿ ನನ್ನ ಮಗ ಕೂಡ ಕೆಲಸ ಮಾಡಲಿದ್ದಾನೆ ಎಂದು ಸಚಿವರು ಹೇಳಿದರು.
18 ವಯಸ್ಸಿಗೆ ದೇಶದ ಗಡಿ ಕಾಯಲು ಯುವಕರನ್ನು ಕಳುಹಿಸುತ್ತೇವೆ. 18ನೇ ವಯಸ್ಸಿಗೆ ಮತದಾನದ ಹಕ್ಕು ನೀಡಲಾಗಿದೆ. ಶೆಟ್ಟರ್ ಯುವಕರಿದ್ದಾಗ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಅವರು ಸಿಎಂ ಆಗಿದ್ದು. ಇದೀಗ ನನ್ನ ಮಗ ಯುವಕ ಅವನಿಗೆ ಚುನಾವಣೆ ಬೇಕಿತ್ತೇ ಎಂದು ಪ್ರಶ್ನಿಸಲಾಗ್ತಿದೆ ಎಂದು ಹೇಳಿದರು
ಬೆಳಗಾವಿ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ನೀಡುವೆ ಎಂದ ಮೃಣಾಲ್
ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಕನಸು ಕಟ್ಟಿಕೊಂಡಿರುವೆ. ನಿಮ್ಮ ಸೇವೆ ಮಾಡಲು ನನ್ನಗೊಂದು ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮನವಿ ಮಾಡಿದರು. ಬೆಳಗಾವಿ ಜಿಲ್ಲೆಯ ಜನರ ನಾಡಿಮಿಡಿತದ ಬಗ್ಗೆ ನನಗೆ ಅರಿವಿದೆ. ಕಳೆದ 25 ವರ್ಷಗಳಿಂದ ಒಂದೇ ಪಕ್ಷದ ಸಂಸದರಿದ್ದರೂ ಕ್ಷೇತ್ರಕ್ಕೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ನಮ್ಮ ಜಿಲ್ಲೆ ಹೇಳೋಕೆ ಎರಡನೇ ರಾಜಧಾನಿ, ಆದರೆ ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ತಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತಿದ್ದು, ಬೆಳಗಾವಿ ಮನೆ ಮಗನಾದ ನನ್ನನ್ನು ಬೆಂಬಲಿಸಿ .ಎಂದು ಮೃಣಾಲ್ ಮನವಿ ಮಾಡಿದರು.
ಒಂದು ಲಕ್ಷ ಮತಗಳಿಂದ ಮೃಣಾಲ್ ಹೆಬ್ಬಾಳ್ಕರ್ ಗೆಲುವು
ನಮ್ಮ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಮದಾಪೂರ ಗ್ರಾಮದ ಮುಖಂಡ ಚಂದ್ರಶೇಖರ್ ಕೊಣ್ಣೂರ ಭವಿಷ್ಯ ನುಡಿದರು. ಎದುರಾಳಿಗಳ ಬೆದರಿಕೆಯಿಂದ ಕಾಂಗ್ರೆಸ್ ಸಮಾವೇಶಗಳಿಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಯಾರ ಭಯಕ್ಕೂ ಜಗ್ಗದೆ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ಕರೆ ನೀಡಿದರು. ಈ ಮೂಲಕ ಮಮದಾಪೂರ ಗ್ರಾಮದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಚಂದ್ರಶೇಖರ್ ಕೊಣ್ಣೂರ ಮನವಿ ಮಾಡಿದರು.
ಪ್ರಚಾರದಲ್ಲಿ ಮುಖಂಡರಾದ ಸಿದ್ದಲಿಂಗ ದಳವಾಯಿ, ಡಾ.ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ, ಗೋಕಾಕ್ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಡಾಂಗೆ ಸಚಿವರಿಗೆ ಸಾಥ್ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ