*ಜಾತ್ಯಾತೀತ ತತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು: ಪ್ರೋ.ರಾಜೀವ್ ಗೌಡ*
ಮೆಥೋಡಿಸ್ಟ್ ಚರ್ಚ್ ನಲ್ಲಿ ಮತಯಾಚಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ: ಜಾತ್ಯಾತೀತ ತತ್ವ, ಭಾರತದ ಸಂವಿಧಾನ ಉಳಿಸಿಕೊಳ್ಳುವ ಸಲುವಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲು ಮುಂದಾಗಬಹುದು ಎಂದು ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೋ. ರಾಜೀವ್ ಗೌಡ ಹೇಳಿದರು.
ಬೆಳಗಾವಿ ನಗರದ ಮೆಥೋಡಿಸ್ಟ್ ಚರ್ಚ್‌ನ ಜೆ.ಟಿ. ಸೀಮೆನ್ಸ್ ಹಾಲ್ ನಲ್ಲಿ ನಡೆದ ಕ್ರೈಸ್ತ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಾತ್ಯಾತೀತ ತತ್ವ ಉಳಿಯಬೇಕಾದರೆ, ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಎಂದರು.
ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಸತತವಾಗಿ ಅನ್ಯಾಯ ಆಗುತ್ತಿದ್ದು, ಇದರ ವಿರುದ್ಧ ಧ್ವನಿ ಎತ್ತಲು ಮೃಣಾಲ್ ಹೆಬ್ಬಾಳಕರ್ ಅವರಂಥ ಯುವ ಸಂಸದರು ಗೆಲ್ಲಬೇಕು. ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು, ಕರ್ನಾಟಕದ ಜನ ಪಾಪ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಿಜ,25 ಜನ ಬಿಜೆಪಿ ಎಂಪಿಗಳನ್ನು ಗೆಲ್ಲಿಸಿ ಕರ್ನಾಟಕದ ಜನ ಪಾಪ ಮಾಡಿದ್ದಾರೆ ಎಂದು ರಾಜೀವ್ ಗೌಡ ತಿರುಗೇಟು ನೀಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದು, ರಾಜ್ಯಕ್ಕೆ ಅನ್ಯಾಯ ಆದ್ರೆ, ನಾವಂತು ವಿರೋಧಿಸುತ್ತೇವೆ. ಕರ್ನಾಟಕದಿಂದ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಜನರ ಕಷ್ಟಗಳನ್ನು ನೋಡಲು ಸಾಧ್ಯವಾಗದೇ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ಲಕ್ಷಾಂತರ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದು ರಾಜೀವ್ ಗೌಡ ಹೇಳಿದರು.
ಶಾಂತಿ ಸೌಹಾರ್ದತೆ ಕಾಪಾಡಲು ಕಾಂಗ್ರೆಸ್ ಬೆಂಬಲಿಸಿ
ಸಮಾಜದಲ್ಲಿ ಶಾಂತಿ ಸೌಹಾರ್ದತೆ ಉಳಿಯಬೇಕೆಂದರೆ ಕಾಂಗ್ರೆಸ್ ಗೆ ಮತ ಹಾಕಬೇಕು. ಕಾಂಗ್ರೆಸ್ ಸರ್ಕಾರ ಕ್ರಿಶ್ಚಿಯನ್ ನಿಗಮ ಮಾಡಿ 100 ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಎಲ್ಲರ ಮತದಾನದ ಹಕ್ಕಿಗೂ ಕುತ್ತು ಬರುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಅವರನ್ನು ಗೆಲ್ಲಿಸಿ, ಎಲ್ಲರ ಅಭ್ಯುದಯಕ್ಕೆ ಶ್ರಮಿಸಲಿದ್ದಾನೆ ಎಂದು ಸಚಿವರು ಹೇಳಿದರು.
ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಆಸಿಫ್ ಸೇಠ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮದ್ ನಲಪಾಡ್ ಮಾತನಾಡಿದರು.
ಈ ವೇಳೆ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಫಾದರ್ ಡಿ.ಶಾಂತಪ್ಪ ಅಂಕಲಗಿ, ಜಾನ್ ಹಂಚಿನಮನಿ, ಮಧುಕರ್ ಉತ್ತಂಗಿ, ಸಿ.ಟಿ.ಥಾಮಸ್, ಮೆಥೋಡಿಸ್ಟ್ ಎಪಿಸ್ಕೋಪಲ್ ಸೊಸೈಟಿಯ ಅಧ್ಯಕ್ಷರಾದ ದಿನಕರ ಚಿಲ್ಲಾಳ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ