ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಸುಟ್ಟು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿ ಸುಟ್ಟು ಹಾಕಿದ್ದು ತಪ್ಪು. ಈಶ್ವರಪ್ಪ ಒಬ್ಬ ಮಾಜಿ ಸಚಿವ, ಉಪಮುಖ್ಯಮಂತ್ರಿಯಾಗಿ ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ. ಒಂದು ಪಕ್ಷದ ಪ್ರಣಾಳಿಕೆಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಗುಡುಗಿದರು
ನಾನೂ ಒಬ್ಬ ಹಿಂದೂ, ಅವರೂ ಕೂಡ ಒಬ್ಬ ಹಿಂದೂ. ಆದರೆ ಬಿಜೆಪಿಯ ಹಿಂದೂತ್ವ ಬೇರೆ ನಮ್ಮ ಹಿಂದೂತ್ವ ಬೇರೆ. ಜನರಿಗೆ ನಾವು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದರೆ ಅದನ್ನು ಸುಟ್ಟು ಹಾಕುವುದು ಎಷ್ಟು ಸರಿ. ಇಂತಹ ಬೇಜವಾಬ್ದಾರಿಯನ್ನು ಸಹಿಸಲಾಗದು ಎಂದು ಕಿಡಿಕಾರಿದ್ದಾರೆ.
ಬಜರಂಗದಳ ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಈ ಹಿನ್ನೆಲೆಯಲ್ಲಿ ಸಿಡಿದೆದ್ದಿರುವ ಬಿಜೆಪಿಯ ನಾಯಕ ಈಶ್ವರಪ್ಪ ಇಂದು ಕಲಬುರ್ಗಿಯಲ್ಲಿ ಪ್ರಣಾಳಿಕೆ ಪ್ರತಿಯನ್ನೇ ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ