ಪ್ರಗತಿವಾಹಿನಿ ಸುದ್ದಿ, ಪಣಜಿ: ತಾಂತ್ರಿಕ ದೋಷದಿಂದಾಗಿ ನೌಕಾದಳದ ವಿಮಾನ (ಮಿಗ್-೨೯ ಕೆ) ವಾಸ್ಕೋ ದಾಬೋಲಿಂ ವಿಮಾನ ನಿಲ್ದಾಣದಿಂದ ಕೆಲ ಕಿ.ಮಿ ಅಂತರದಲ್ಲಿ ಅಪಘಾತಕ್ಕೀಡಾಗಿದೆ.
ಶನಿವಾರ ಮಧ್ಯಾನ್ಹ ೧೨ ಗಂಟೆಗೆ ಘಟನೆ ಸಂಭವಿಸಿದೆ. ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಇಬ್ಬರು ಫೈಲಟ್‌ಗಳು ಪ್ಯಾರಾಶೂಟ್ ಬಳಸಿ ವಿಮಾನದಿಂದ ಹೊರ ಜಿಗಿದಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ನಂತರ ವಿಮಾನವು ವೆರ್ಣಾ ಇಂಡಸ್ಟಿಯಲ್ ಎಸ್ಟೇಟ್‌ನಲ್ಲಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ.
ದಾಬೋಲಿಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐಎನ್‌ಎಸ್ ಹಂಸಾ ನಿಲ್ದಾಣವಿದೆ. ಇಲ್ಲಿಂದಲೇ ಈ ನೌಕಾ ವಿಮಾನವು ಹಾರಾಟ ಆರಂಭಿಸಿತ್ತು. ವಿಮಾನದಲ್ಲಿ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ವಿಮಾನವು ವೆರ್ಣಾ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಧರೆಗುರುಳಿ ಸುಟ್ಟು ಭಸ್ಮವಾಗಿದೆ.
ಇದರಿಂದಾಗಿ ದುರ್ಘಟನೆ ನಡೆದ ಸ್ಥಳದಲ್ಲಿ ವಿಮಾನದ ಕೆಲವೇ ತುಣುಕು ಮಾತ್ರ ಪತ್ತೆಯಾಗಿದ್ದು, ಉಳಿದೆಲ್ಲ ಭಾಗ ಬೆಂಕಿಗಾಹುತಿಯಾಗಿದೆ.
ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದ ಕೂಡಲೇ ಫೈಲಟ್ ಕೆ.ಎಂ ಶಿವಖಂಡ ಮತ್ತು ದೀಪಕ್ ಯಾದವ್ ರವರು ಪ್ಯಾರಾಶೂಟ್ ಬಳಸಿ ವಿಮಾನದಿಂದ ಹೊರಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ