*ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು: ಯು. ನಿಸಾರ್ ಅಹಮ್ಮದ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ, ಬಾಗಲಕೋಟೆ, ವಿಜಾಪುರ, ಧಾರವಾಡನಲ್ಲಿ ಮುಸ್ಲೀಂ, ಕ್ರೈಸ್ತ, ಬೌದ್ಧ, ಸಿಖ್, ಜೈನ್ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಭಾಗದ ಅಲ್ಪಸಂಖ್ಯಾತರ ಜೀವನಮಟ್ಟ ಸುಧಾರಣೆಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸಮುದಾಯದ ಜನರು ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮ್ಮದ್ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ (ಜ.15) ನಡೆದ ಆರ್ಥಿಕ ಆಯವ್ಯಯ- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಗಳ ಅನುಷ್ಠಾನದ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರಿಗೆ ನೀಡಲಾದ ಯೋಜನೆಗಳ ಸೌಕರ್ಯಗಳು ಸರಳ ರೀತಿಯಲ್ಲಿ ಒದಗಿಸುವ ಕುರಿತು ಸಭೆ ನಡೆಸಿ, ಯೋಜನೆಗಳಲ್ಲಿನ ದೋಷಗಳನ್ನು ತಿದ್ದುಪಡಿಗೊಳಿಸಿ ಸಮರ್ಪಕ ಅನುಷ್ಠಾನಗೊಳಿಸಲು ಮುಖಂಡರು ನೀಡಿದ ಸಲಹೆ-ಕೋರಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಬೇರೆಬೇರೆ ಜಿಲ್ಲೆಗಳಿಂದ ಅಲ್ಪಸಂಖ್ಯಾತರು ಕೇಂದ್ರ ಕಚೇರಿಗೆ ಬರುವುದು ಕಷ್ಟವಾದ ಕಾರಣ ವಿಭಾಗ, ಜಿಲ್ಲಾ ಮಟ್ಟದಲ್ಲಿ ಸಲಹೆಗಳನ್ನು ಪಡೆಯಲು ರಾಜ್ಯಾದ್ಯಂತ ಸಭೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಸರ್ಕಾರ ಅಲ್ಪಸಂಖ್ಯಾತರಿಗೆ ಬ್ಯಾಂಕ್ ಸಾಲ ಸೌಲಭ್ಯ, ಶೈಕ್ಷಣಿಕ, ಆರ್ಥಿಕ, ಅಭಿವೃದ್ಧಿ, ವಿದ್ಯಾರ್ಥಿವೇತನ ಸೇರಿಂದರೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.
ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅರಿವು ಸಾಲ, ಶ್ರಮ ಶಕ್ತಿ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಆರ್ಥಿಕವಾಗಿ ಮುಂದೆ ತರಲು ಸರ್ಕಾರ ಶ್ರಮಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮ್ಮದ್ ಅವರು ತಿಳಿಸಿದರು.
ಜೈನ್ ಸಮುದಾಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ತಾಂತ್ರಿಕ ಉನ್ನತ ಶಿಕ್ಷಣ ಪಡೆಯಲು ಬ್ಯಾಂಕ್ ಗಳಲ್ಲಿ ಶಿಕ್ಷಣ ಸಾಲ ಸೌಲಭ್ಯ ಒದಗಿದ ನಂತರ ಪ್ರವೇಶ ಪಡೆಯುವಷ್ಟರಲ್ಲಿ ಕಾಲೇಜು ಪ್ರವೇಶ ಕೊನೆಯ ದಿನಾಂಕ ಮುಕ್ತಾಯವಾಗಿರುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕಾಲಾವಕಾಶ ನೀಡುವ ಕುರಿತು ಆಯೋಗದಿಂದ ಸೂಚನೆ ಮಾಡಬೇಕು ಎಂದು ಜೈನ್ ಸಮುದಾಯದ ಮುಖಂಡರೊಬ್ಬರು ಮನವಿ ಮಾಡಿಕೊಂಡರು.
ಅಗತ್ಯ ಸ್ಥಳಗಳಲ್ಲಿ ಸಮುದಾಯ ಭವನಗಳು ಆಗಬೇಕಿದೆ. ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನಗಳ ಕೊರತೆಯಿದೆ. ಈ ಕುರಿತು ಆಯೋಗದಿಂದ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರೊಬ್ಬರು ಮನವಿ ಮಾಡಿಕೊಂಡರು.
ಶಾಲಾ ಕಾಲೇಜುಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪ್ರಸಕ್ತ ಸಾಲಿನಲ್ಲಿ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ತ್ವರಿತವಾಗಿ ಸಿಕ್ಕಲ್ಲಿ ಮುಂದಿನ ಶಿಕ್ಷಣಕ್ಕೆ ಅವರಿಗೆ ಸಹಾಯವಾಗಲಿದೆ. ಅಲ್ಪಸಂಖ್ಯಾತರ ಸಮುದಾಯದ ಸಾಕಷ್ಟು ನಿರಾಶ್ರಿತರಿಗೆ ವಸತಿ ಯೋಜನೆಗಳನ್ನು ಕಲ್ಪಿಸುವುದು ಅಗತ್ಯವಿದೆ ಎಂದು ಸವದತ್ತಿ ಅಲ್ಪಸಂಖ್ಯಾತರ ಮುಖಂಡರು ಸಲಹೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮ್ಮದ್ ಅವರು ಬೆಳಗಾವಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಅಲ್ಪಸಂಖ್ಯಾತರ ಸಮುದಾಯದ ಮುಖಂಡರ ಮನವಿಗಳನ್ನು ಸ್ವೀಕರಿಸಿದರು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಆಯೋಗದ ವಿಶೇಷಾಧಿಕಾರಿ ಜಾಫರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಎಫ್.ಯು ಪೂಜೇರ ಸೇರಿದಂತೆ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತ ಸಮುದಾಯದ ಜೈನ್, ಮುಸ್ಲಿಂ, ಕ್ರೈಸ್ತ, ಸಿಖ್ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ