*ಇಡಿ ತನಿಖೆ ಎದುರಿಸುತ್ತಿರುವ ಶಾಸಕ ಅಭಯ ಪಾಟೀಲ್ ರಾಜೀನಾಮೆ ನೀಡಲಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್ ಭ್ರಷ್ಟಾಚಾರ ಹಾಗೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ (ಡಿ.ಎ.) ಪ್ರಕರಣ ಎದುರಿಸುತ್ತಿದ್ದಾರೆ. ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಆಗ್ರಹಿಸಿದ್ದಾರೆ.
ಬುಧವಾರ ಕನ್ನಡ ಸಾಹಿತ್ಯ ಭವನದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆಸಿರುವ ಸಚಿವ ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ಮಾತನಾಡಿರುವ ಶಾಸಕ ಅಭಯ ಪಾಟೀಲ್ ಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಕಳೆದ 10 ವರ್ಷಗಳ ಹಿಂದಿನಿಂದಲೂ ಅಕ್ರಮ ಆಸ್ತಿ ಕಬಳಿಕೆ ಹಾಗೂ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಲೋಕಾಯುಕ್ತ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ಇದೆ ಎಂದರು.
ಬಿಜೆಪಿಗರು ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವ ಮುನ್ನ ಭ್ರಷ್ಟಾಚಾರ ನಡೆಸಿರುವ ಶಾಸಕ ಅಭಯ ಪಾಟೀಲ್ ಅವರ ರಾಜೀನಾಮೆ ಪಡೆದು ಹೋರಾಟ ಮಾಡಬೇಕು. ಅಲ್ಲದೆ ಅವರನ್ನು ಬಿಜೆಪಿಯಿಂದ ಹೊರ ಹಾಕಬೇಕು ಎಂದ ಅವರು, ಶೀಘ್ರದಲ್ಲೇ ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದಲೇ ಪಾದಯಾತ್ರೆ ಹೋರಾಟ ಆರಂಭಿಸಲಾಗುವುದು ಎಂದರು.
ರಾಜಕುಮಾರ ಟೋಪಣ್ಣವರ ಮಾತನಾಡಿ, ಬಿಜೆಪಿ ನಾಯಕರು ರಾಜ್ಯಾದ್ಯಂತ ಕಾಂಗ್ರೆಸ್ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಹೋರಾಟ ಮಾಡುತ್ತಿರುವುದು ಅವರಿಗೆ ನೈತಿಕತೆ ಇಲ್ಲ. ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳುತ್ತಾರೆ. ಆದರೆ ಈಗ ಅದನ್ನು ಬದಲಾವಣೆ ಮಾಡಿದ್ದಾರೆ. ಮೈನಿಂಗ್, ಭ್ರಷ್ಟಾಚಾರ ಮಾಡಿರುವ ಶಾಸಕ ಅಭಯ ಪಾಟೀಲ್ ರಾಜೀನಾಮೆ ಪಡೆಯುವುದು ಯಾವಾಗ ಎಂದು ಪ್ರಶ್ನಿಸಿದರು.
ಶಾಸಕ ಅಭಯ ಪಾಟೀಲ್ ನಾಗೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಭಾಷಣ ಮಾಡುವುದು ಹಾಸ್ಯಾಸ್ಪದ. ಕೂಡಲೇ ಶಾಸಕ ಅಭಯ ಪಾಟೀಲ್ ಅವರ ರಾಜೀನಾಮೆ ಪಡೆದು ಬೇರೆ ಪಕ್ಷದವರ ರಾಜೀನಾಮೆಗೆ ಹೋರಾಟ ನಡೆಸಲಿ ಎಂದು ಸವಾಲು ಹಾಕಿದರು.
ಅನಿಲ್ ಉಪರಿ, ಯುವರಾಜ ತಳವಾರ, ಸದ್ದಾಂ ತಹಶಿಲ್ದಾರ, ಸಿದ್ಧಾರ್ಥ ಚೌಹಾನ್, ಸಚಿನ್ ತಳವಾರ, ಸಲೀಂ ಸನದಿ, ಆನಂದ ಪೂಜಾರಿ, ಬಲರಾಮ ಸಂಗೋಳಿ, ಆಸೀಫ್ ಮುಲ್ಲಾ, ಆಶೀಷ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.


