Karnataka NewsLatest

ಸ್ಪರ್ಧಾತ್ಮಕ ಪರೀಕ್ಷೆ ಉಚಿತ ತರಬೇತಿ ರದ್ದುಪಡಿಸಿದ್ದಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ 2020 -21ನೇ ಸಾಲಿನಲ್ಲಿ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಉಚಿತ ತರಬೇತಿ ರದ್ದುಪಡಿಸಲಾಗಿದೆ. ಇದಕ್ಕೆ ಕಾರಣ ಕೊರೋನಾ.

ಕೊರೋನಾ ಕಾರಣದಲ್ಲಿ ಅನುದಾನ ಕೊರತೆಯಾಗಿದ್ದರಿಂದ ಈ ಉಚಿತ ತರಬೇತಿಗಳ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿಲ್ಲ ಎಂದು ರಾಜ್ಯ ಸರಕಾರ ವಿಧಾನಸಭೆಯಲ್ಲಿ ತಿಳಿಸಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.

ಪ್ರತಿ ವರ್ಷ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ತರಬೇತಿಯನ್ನು ನೀಡಲಾಗುತ್ತದೆ. 2019ರಲ್ಲಿ ಐಎಎಸ್ ತರಬೇತಿಗೆ 330 ಹಾಗೂ ಬ್ಯಾಂಕಿಂಗ್ ಪರೀಕ್ಷೆಗಾಗಿ 162 ಅಭ್ಯರ್ಥಿಗಳು ಉಚಿತ ತರಬೇತಿ ಪಡೆದಿದ್ದಾರೆ. ಪ್ರತಿ ವರ್ಷ ಐಎಎಸ್ ಮತ್ತು ಕೆಎಎಸ್ ಗೆ 7 ತಿಂಗಳು ಹಾಗೂ ಬ್ಯಾಂಕಿಂಗ್ ಪರೀಕ್ಷೆಗೆ 2 ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.

ತರಬೇತಿ ನೀಡುವ ಸಂಸ್ಥೆಗೆ ತರಬೇತಿ ಶುಲ್ಕವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೇ ತುಂಬಲಾಗುತ್ತದೆ. ಅಭ್ಯರ್ಥಿಗಳಿಗೆ ಕೋರ್ಸ್ ಮಟೀರಿಯಲ್ಸ್ ನೀಡಲಾಗುತ್ತದೆ. ಜೊತೆಗೆ ಅಭ್ಯರ್ಥಿಗೆ ಮಾಸಿಕ ತರಬೇತಿ ಭತ್ಯೆಯನ್ನು ಸಹ ನೀಡಲಾಗುತ್ತದೆ.

ಐಎಎಸ್ ಪರೀಕ್ಷೆಗೆ ದೆಹಲಿಯಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ 10 ಸಾವಿರ ರೂ. ಹೈದರಾಬಾದ್ ನಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ 8 ಸಾವಿರ ರೂ. ಬೆಂಗಳೂರಿನಲ್ಲಿ ತರಬೇತಿ ಪಡೆಯುವ ಸ್ಥಳೀಯ ಅಭ್ಯರ್ಥಿಗಳಿಗೆ 4 ಸಾವಿರ ರೂ ಹಾಗೂ ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ 6 ಸಾವಿರ ರೂ ಮಾಸಿಕ ಭತ್ಯೆ ನೀಡಲಾಗುತ್ತದೆ. ಕೆಎಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಪಡೆಯುವ ಸ್ಥಳೀಯ ಅಭ್ಯರ್ಥಿಗಳಿಗೆ 4 ಸಾವಿರ ರೂ. ಹಾಗೂ ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ 6 ಸಾವಿರ ರೂ. ನೀಡಲಾಗುತ್ತದೆ.

ಆದರೆ ಸಚಿವರ ಉತ್ತರದಿಂದ ತೃಪ್ತರಾಗದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಈ ವರ್ಷ ಉಚಿತ ತರಬೇತಿ ರದ್ದುಪಡಿಸಿರುವ ಸರಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಇಂತಹ ಅವಕಾಶದಿಂದ ಯಾವುದೇ ಕಾರಣಕ್ಕೆ ವಂಚಿತರಾಗಬಾರದು. ಕೂಡಲೇ ಉಚಿತ ತರಬೇತಿಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button