Latest

*ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿನಂದನಾ ಪತ್ರದಲ್ಲೇನಿದೆ?*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಭೂಮಿಯ ಮೇಲಿನ ನಡೆದಾಡುವ ದೇವರು, ರಾಜ್ಯ ಕಂಡ ಅಪರೂಪದ ಸಂತ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82) ಅಸ್ತಂಗತರಾಗಿದ್ದು, ಮಹಾಸಂತನ ಅಂತಿಮ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.

ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗುವ ಮುನ್ನವೇ 2017ರಲ್ಲಿಯೇ ತಮ್ಮ ಅಂತ್ಯಸಂಸ್ಕಾರದ ಬಗ್ಗೆ ವಿಲ್ ಬರೆದಿದ್ದರು. ತಮ್ಮ ದೇಹವನ್ನು ಭೂಮಿಯಲ್ಲಿಡದೇ ಅಗ್ನಿಗರ್ಪಿತ ಮಾಡಬೇಕು ಎಂದು ಬರೆದಿದ್ದರು. ಸಿದ್ದೇಶ್ವರ ಶ್ರೀಗಳು ಬರೆದಿದ್ದ ಅಂತಿಮ ಅಭಿನಂದನಾ ಪತ್ರದಲ್ಲಿರುವ ಅಂಶಗಳೇನು ಇಲ್ಲಿದೆ ಮಾಹಿತಿ.

Home add -Advt

ಬದುಕು ಅನುಭವಗಳ ಪ್ರವಾಹ. ಅದರ ಸಿರಿವಂತಿಕೆಯು ವಿಶ್ವ ಚಿಂತನೆ, ಸತ್ಯ ಶೋಧನೆಗಳಿಂದ… ಅದರ ಸೌಂದರ್ಯವು ರಾಗ, ದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ… ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ. ಅಂತಹ ಜೀವನದ ಉಪಯುಕ್ತವಾದ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಸ್ವ-ಪರ ನೆಮ್ಮದಿಗೆ ಕಾರಣ. ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು ಗುರುದೇವರು. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹ-ಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು.

ನಿಸರ್ಗವು ಮೈಮನಸ್ಸುಗಳಿಗೆ ತಂಪನ್ನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿ ಬೆಳಗ ಹರಡಿವೆ. ಜಾಗತಿಕ ತತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ. ಬದುಕು ಮುಗಿಯುತ್ತಿದೆ ದೀಪ ಆರಿದಂತೆ, ತೆರೆ ಅಡಗಿದಂತೆ. ಮೇಘ ಕರಗಿದಂತೆ ಉಳಿಯುವುದು ಬರಿ ಬಯಲು. ಮಹಾಮೌನ, ಶೂನ್ಯ ಸತ್ಯ. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ. ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಭೇಕು. ಅದಕ್ಕಾಗಿ ಈ ಅಂತಿಮ ಅಭಿನಂದನಾ ಪತ್ರ….

ದೇಹದ ವಿಷಯದಲ್ಲಿ ಒಂದೆರಡು ಆಶಯಗಳು… ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು. ಶ್ರಾದ್ಧಿಕ ವಿಧಿ-ವಿಧಾನಗಳು ಅನಗತ್ಯ.. ಚಿತಾ ಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.

ಅಂತಿಮ ನೆನಹು: ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ. ಇಲ್ಲ ಇಲ್ಲ ಎಂಬುದು ತಾನಿಲ್ಲ, ಗುಹೇಶ್ವರನೆಂಬುದು ತಾ ಬಯಲು ಎಂದು ಪತ್ರ ಬರೆದಿಟ್ಟಿದ್ದರು.

 

 

*ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ: ಸಿಎಂ ಬೊಮ್ಮಾಯಿ ಮನವಿ*

https://pragati.taskdun.com/siddeshwara-swamijideathcm-basavaraj-bommaivijayapura/

Related Articles

Back to top button