ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಕೈಲಾಸ ಎಂಬ ತನ್ನದೇ ದೇಶವನ್ನು ಘೋಷಿಸಿಕೊಂಡ ಬಳಿಕ ಇದೀಗ ಕೈಲಾಸದ ಕರೆನ್ಸಿ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಸ್ವತ: ನಿತ್ಯಾನಂದ ಕೈಲಾಸದ ರಿಸರ್ವ್ ಬ್ಯಾಂಕ್ ತನ್ನ ನೋಟನ್ನು ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣದ ಆರೋಪ ಎದುರಿಸುತ್ತಿರುವ ನಿತ್ಯಾನಂದ ಭಾರತದಿಂದ ಪಲಾಯನಗೈದಿದ್ದು, ಇದೀಗ ಕೈಲಾಸ ಎಂಬ ತನ್ನದೇ ದೇಶ ಘೋಷಿಸಿ ವಾಸಮಾಡುತ್ತಿದ್ದಾನೆ. ಆದರೆ ಇದುವರೆಗೂ ನಿತ್ಯಾನಂದ ಎಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲ.
ಇದೀಗ ಕರೆನ್ಸಿ ಬಿಡುಗಡೆ ಮಾಡಿರುವ ನಿತ್ಯಾನಂದ, ಈ ಕುರಿತು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದು, ಕೈಲಾಸದಲ್ಲಿ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ, ಕೈಲಾಸದ ರಿಸರ್ವ್ ಬ್ಯಾಂಕ್ ಅನ್ನು ಗಣಪತಿ, ಪರಮಶಿವ ಮತ್ತು ಗುರುಗಳ ಪಾದಕ್ಕೆ ಸಮರ್ಪಿಸುತ್ತಿದ್ದೇವೆ. ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ, ಜಗತ್ಗುರು ಮಹಾಸನ್ನೀಧನಂ ಅವರ ದೈವಿಕ ಪವಿತ್ರ ಭಗವಾನ್ ನಿತ್ಯಾನಂದ ಪರಮಶಿವಂ! ಸನ್ಯಾಸಿಗಳ ತಂಡವು 100 ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಮತ್ತು ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನವನ್ನು ಮಾಡಿದೆ. ಅಲ್ಲದೆ, ಕೈಲಾಸಾದ ಕರೆನ್ಸಿಗಳನ್ನು ಆಚರಣಾತ್ಮಕವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೈಲಾಸ ಎಂಬುದು ಸ್ವತಂತ್ರ ದೇಶವಾಗಿದ್ದು, ಇಲ್ಲಿಗೆ ನಾನೇ ಪ್ರಧಾನಿ. ಇಲ್ಲಿ ಪೊಲೀಸ್, ಕೋರ್ಟ್ ವ್ಯವಸ್ಥೆ ಇರಲಿದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಶಿಕ್ಷಣ ಮತ್ತು ವೈದ್ಯಕೀಯ ಉಚಿತವಾಗಿ ನೀಡಲಾಗುವುದು ಎಂದಿದ್ದ ನಿತ್ಯಾನಂದ ಈ ದೇಶಕ್ಕಾಗಿಯೇ ವಿಶೇಷ ಕರೆನ್ಸಿ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ಗಣೇಶಚತುರ್ಥಿ ಸಂದರ್ಭದಲ್ಲಿ ಕೈಲಾಸ ಕರೆನ್ಸಿ ಬಿಡಿಗಡೆಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ