
ಪ್ರಗತಿ ವಾಹಿನಿ ಸುದ್ದಿ, ಪುಣೆ – ನಮ್ಮ ಸಂಸ್ಥೆ ತಯಾರಿಸಿದ ಕೋವಿಡ್ ಲಸಿಕೆ (ಕೋವಿಶೀಲ್ಡ್) ವಿಶ್ವದ ೩೦ ಕೋಟಿ ಜನರ ಪ್ರಾಣ ಉಳಿಸಲು ನೆರವಾಗಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಸೈರಸ್ ಪೂನಾವಾಲಾ ಹೇಳಿದ್ದಾರೆ.
ಪೂನಾದ ಮರಾಠಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಶ್ವದ ೧೭೦ ದೇಶಗಳಲ್ಲಿ ೩೦ ಕೋಟಿ ಜನರ ಪ್ರಾಣ ಉಳಿಸಲು ಲಸಿಕೆ ನೆರವಾಗಿದೆ. ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಲಸಿಕೆ ತಯಾರಿಸಿರುವುದು ನಮ್ಮ ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದಿದ್ದಾರೆ.
ಪೂನಾದ ಸಣ್ಣ ಓಣಿಯ ಸಣ್ಣ ಕಟ್ಟಡದಲ್ಲಿ ಪ್ರಾರಂಭಗೊಂಡ ಸೀರಮ್ ಸಂಸ್ಥೆ ಇಂದು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಕಾರಣರಾದ ಸಂಸ್ಥೆಯ ಎಲ್ಲ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕೋವಿಶೀಲ್ಡ್ ಲಸಿಕೆ ವಿಶ್ವದಲ್ಲಿ ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸೋಂಕು ತಡೆಗಟ್ಟಲು ನೆರವಾಗಿದೆ. ಇಷ್ಟು ಕಡಿಮೆ ಬೆಲೆಗೆ ಲಸಿಕೆ ಉತ್ಪಾದನೆ ಸಾಧ್ಯವಾದ ಬಗ್ಗೆ, ಸಂಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ವಿಶ್ವವೇ ಬೆರಗಾಗಿದೆ ಎಂದು ಪೂನಾವಾಲಾ ಹೇಳಿದ್ದಾರೆ.