
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಸ್ಟಿಂಗ್ ಆಪರೇಷನ್ ಬಗ್ಗೆ ಪಾರದರ್ಶಕ ತನಿಖೆ ನಡೆದು ಸತ್ಯ ಹೊರಬರಬೇಕು ಎಂದುದ್ದಾರೆ.
ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸ್ಟಿಂಗ್ ಆಪರೇಷನ್ ವಿಚಾರ ನನಗೆ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಗಮನಕ್ಕೆ ಬಂತು. ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು. ಜನರಿಗೆ ಸತ್ಯಾಂಶ ತಿಳಿಯಬೇಕು ಎನ್ನುವ ಉದ್ದೇಶದಿಂದ ನಾನೇ ಸ್ವಯಂಪ್ರೇರಿತವಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದರು.
ಒಬ್ಬ ಪತ್ರಕರ್ತ ಮತ್ತು ಮಂಗಳೂರಿನ ಲೇಡಿ ಕೃಪಾ ಆಳ್ವಾ ಸೇರಿಕೊಂಡು ಈ ಕೆಲಸ ಮಾಡಿದ್ದಾರೆ ಎಂದರು. ಈ ಸ್ಟಿಂಗ್ ಆಪರೇಷನ್ ನಲ್ಲಿ ಯಾವುದೇ ಹುರುಳಿಲ್ಲ, ಸಂಪೂರ್ಣ ಸತ್ಯಕ್ಕೆ ದೂರವಾದ ಆರೋಪವಿದು ಎಂದು ತಿಳಿಸಿದರು.
ನಾನು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಂತಹ ಯಾವುದೇ ಕೃತ್ಯಗಳು ನಡೆದಿರಲಿಲ್ಲ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ ಕೀಳು ಆರೋಪ ಬಂದೇ ಇರಲಿಲ್ಲ. ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಬ್ಲಾಕ್ಮೇಲ್ ತಂತ್ರಗಳನ್ನು ಮಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದ ಮೇಲೆ ನನಗೆ ಯಾವ ಆತಂಕವೂ ಇಲ್ಲ.
ಇನ್ನು ನನಗೆ ಯಾರ ನೈತಿಕ ಬೆಂಬಲವೂ ಬೇಕಾಗಿಲ್ಲ, ಯಾರೂ ನನ್ನ ಪರವಾಗಿ ನಿಲ್ಲಬೇಕಾದ ಅಗತ್ಯವೂ ಇಲ್ಲ. ರಾಜಕೀಯ ಲಾಭಕ್ಕಾಗಿ ಕೆಲವರು ಮಾತನಾಡುತ್ತಿದ್ದಾರೆ, ಮಾತನಾಡಿಕೊಳ್ಳಲಿ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು. ಇದರ ಹಿಂದೆ ಸ್ವಪಕ್ಷದವರಿದ್ದಾರೋ ಅಥವಾ ವಿರೋಧ ಪಕ್ಷದವರಿದ್ದಾರೋ ಎಂಬುದು ತನಿಖೆಯ ನಂತರವೇ ತಿಳಿಯಲಿದೆ ಎಂದರು.
ನಾನು ಬೇಜಾರಾಗುವ ಅಥವಾ ಹೆದರುವ ಪ್ರಶ್ನೆ ಉದ್ಭವವಾಗುವುದಿಲ್ಲ. ಈ ಪ್ರಕರಣವಂತೂ ನೂರಕ್ಕೆ ನೂರು ಸೃಷ್ಟಿ ಮಾಡಿರುವುದು. ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದುದ್ದು. ಅಂದಿನಿಂದ ಇಂದಿನ ವರೆಗೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ ಆಗಲೂ ನಡೆದಿರಲಿಲ್ಲ. ಈಗ ನನ್ನ ಬಳಿ ಅಧಿಕಾರ ಇಲ್ಲದಾಗ ಇಂತಹ ಷಡ್ಯಂತ್ರ ಮಾಡುತ್ತಿದ್ದಾರೆ. ಅವರ ಉದ್ದೇಶ ಸಫಲವಾಗುವುದಿಲ್ಲ ಎಂಬುದಂತು ಸತ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಸರ್ಕಾರದ ತನಿಖೆ ಮೇಲೆ ಪೂರ್ಣ ನಂಬಿಕೆಯಿದೆ. ಇದಕ್ಕಾಗಿ ಎಸ್ಐಟಿ ಅಥವಾ ಬೇರೆ ಯಾವುದೇ ಉನ್ನತ ಮಟ್ಟದ ತನಿಖೆಯ ಅಗತ್ಯವಿಲ್ಲ. ಇಂತಹ ಷಡ್ಯಂತ್ರ ರೂಪಿಸಿದವರ ಉದ್ದೇಶ ಎಂದಿಗೂ ಸಫಲವಾಗುವುದಿಲ್ಲ ಎಂದು ಹೇಳಿದರು.




